ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಶಿವಗಂಗಾ ವಿವಾಹ ಮಹೋತ್ಸವವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ವೈಭವದಿಂದ ಜರುಗಲಿದೆ.
ರೂಢಿಗತ ಪರಂಪರೆಯಂತೆ ಗಂಗಾಷ್ಟಮಿಯ ದಿನ ಗಂಗಾವಳಿಯ ಗಂಗಾಮಾತಾ ದೇವಾಲಯದಲ್ಲಿ ಆದ ನಿಶ್ಚಿತಾರ್ಥದಂತೆ ವಿವಾಹ ಮಹೋತ್ಸವವು 27-10-2019 ರವಿವಾರ (ಆಶ್ವಿಜ ಬಹುಳ ಚತುರ್ದಶಿಯಂದು) ಇಳಿ ಹೊತ್ತಿನಲ್ಲಿ ಗೋಕರ್ಣದಿಂದ ಸ್ವಲ್ಪ ದೂರದ ಸಮುದ್ರ ತೀರದಲ್ಲಿ ನೆರವೇರುತ್ತದೆ. ಈ ಸ್ಥಳಕ್ಕೆ ಸಾವಿರಾರು ಭಕ್ತರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದು ಈ ವಿವಾಹ ಮಹೋತ್ಸವದ ಪ್ರಸಾದ ಸ್ವೀಕರಿಸುತ್ತಾರೆ. ಸ್ಥಳೀಯ ಎಲ್ಲ ಜನಾಂಗದವರೂ ಈ ವಿವಾಹ ಮಹೋತ್ಸವದಲ್ಲಿ ಭಕ್ತಿ,ಶೃದ್ಧೆ, ಉತ್ಸಾಹ, ಸಂಭ್ರಮಗಳಿಂದ ಭಾಗವಹಿಸುತ್ತಾರೆ. ಕಡಲಿನ ಅಬ್ಬರ, ವಾದ್ಯಘೋಷ , ವೇದಘೋಷ, ವಿಶಿಷ್ಟ ತೋರಣ, ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗನ್ನು ನೀಡುತ್ತವೆ.
ವಿವಾಹ ಮಹೋತ್ಸವ ಮುಗಿಸಿ ಶ್ರೀ ದೇವಾಲಯಕ್ಕೆ ಉತ್ಸವವು ಹಿಂದಿರುಗುವಾಗ ಶ್ರೀ ದೇವಾಲಯದ ಅಮೃತಾನ್ನ ಭವನಕ್ಕೆ ಚಿತ್ತೈಸುತ್ತದೆ . ಈ ಸಂದರ್ಭದಲ್ಲಿ ನವ ವಿವಾಹಿತ ದೇವ ದಂಪತಿಗಳಿಗೆ ರಾಜೋಪಚಾರ ಸೇವೆ ಸಲ್ಲಿಸಲಾಗುತ್ತದೆ . ನಂತರ ಪ್ರಸಾದ ವಿತರಣೆ ಜರುಗಲಿದೆ. ಸರ್ವರೂ ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕಾಗಿ ಆಡಳಿತ ಮಂಡಳಿ ಆತ್ಮೀಯ ಆಮಂತ್ರಣ ನೀಡಿದೆ.