ಕಾರವಾರ: ‘ನಮ್ಮ ವೃತ್ತಿಯನ್ನು ಪ್ರೀತಿಸಿದರೆ ದೀರ್ಘಾಯುಷ್ಯ ನಮ್ಮದಾಗುತ್ತದೆ. ಜೊತೆಗೆ ಆರೋಗ್ಯ ರಕ್ಷಣೆಯ ಅರಿವಿನ ಜೊತೆ ಒಲವು ಮೂಡುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಎನ್.ಅಶೋಕಕುಮಾರ್ ಸಲಹೆ ನೀಡಿದರು.
ಅವರು ನಗರದ ಸರ್ಕಾರಿ ಭವನದಲ್ಲಿ ಧನ್ವಂತರಿ ಜಯಂತಿಯ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಆಯುರ್ವೇದ’ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಒತ್ತಡದ ಜೀವನಶೈಲಿಯಿಂದ ಮಾನಸಿಕ ಹಾಗೂ ದೈಹಿಕವಾಗಿಯೂ ಅನಾರೋಗ್ಯ ಸಮಸ್ಯೆಗಳು ತಲೆದೋರುತ್ತಿವೆ. ಇದರಿಂದ ಆಯುಷ್ಯ ಕ್ಷೀಣಿಸಿದೆ. ಶೀಘ್ರ ಮರಣಕ್ಕೆ ಜೀವನ ಪದ್ಧತಿಯೇ ಕಾರಣವಾಗಿದೆ. ದೀರ್ಘಾಯುಷ್ಯಕ್ಕಾಗಿ ಆಯುರ್ವೇದ ಚಿಕಿತ್ಸೆಯ ಅಭ್ಯಾಸ ಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಒತ್ತಡ ನಿವಾರಣೆಗೆ ಯೋಗ, ಧ್ಯಾನ ಸಹಕಾರಿಯಾಗಬಲ್ಲದು. ಮಕ್ಕಳಿಗೆ ಇದನ್ನು ಕಲಿಸಿ, ಉಪಯುಕ್ತತೆಯನ್ನು ಮನವರಿಕೆ ಮಾಡಬೇಕು’ ಎಂದರು.
‘ಮಕ್ಕಳು ಹಾಗೂ ವೃದ್ಧರ ಮೇಲೆ ಆಧುನಿಕ ವೈದ್ಯ ಪದ್ಧತಿಯ ಪ್ರಯೋಗವಾಗುತ್ತಿದೆ. ಆಧುನಿಕ ವೈದ್ಯ ಪದ್ಧತಿಗಿಂತ ಆಯುರ್ವೇದ ಪದ್ಧತಿಯನ್ನು ಅನುಸರಿಸಬೇಕು. ಆಯುಷ್ ದಿನಾಚರಣೆ ಅರ್ಥಪೂರ್ಣವಾಗಬೇಕೆಂದರೆ ಎಲ್ಲರೂ ಆಯುಷ್ ಬಗ್ಗೆ ಒಲವು ತೋರಬೇಕು. ’ ಎಂದು ಕರೆ ನೀಡಿದರು.
ವಾರ್ತಾಧಿಕಾರಿ ಹಿಮಂತರಾಜು ಮಾತನಾಡಿ, ‘ಆಹಾರ ಕ್ರಮಗಳು ಸೂಕ್ತವಾಗಿದ್ದರೆ ದೀರ್ಘಾಯುಷ್ಯ ಹೊಂದಲು ಸಾಧ್ಯ. ಈಚೆಗಿನ ದಿನಗಳಲ್ಲಿ ವಿಷಕಾರಿ ಪದಾರ್ಥಗಳು ನಮ್ಮ ಹೊಟ್ಟೆಯನ್ನು ಸೇರುತ್ತಿವೆ. ಆಕರ್ಷಣೆಯ ದಾಸನಾದ ಮನುಷ್ಯ ಹಾನಿಕಾರಕ ಆಹಾರಗಳನ್ನು ಸೇವಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಭ್ರಮೆಯಲ್ಲಿ ಬದುಕುವುದಕ್ಕಿಂತ ಆಯುರ್ವೇದವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.
ಡಾ.ಲಲಿತಾ ಪ್ರಾಸ್ತವಿಕವಾಗಿ ಮಾತನಾಡಿ ‘ಆಯುಷ್ ಜಾಗೃತಿಗೆ ಆರೋಗ್ಯ ಇಲಾಖೆ ಜೊತೆ ವಿವಿಧ ಇಲಾಖೆಗಳೂ ಕೈ ಜೋಡಿಸಬೇಕು’ ಎಂದು ವಿನಂತಿಸಿದರು. ಅರಣ್ಯ ಇಲಾಖೆಯ ಆರ್.ಟಿ.ಭಟ್ಟ ಬಗ್ಗೋಣ ಉಪನ್ಯಾಸ ನೀಡಿ, ‘ಔಷಧಿ ಸಸ್ಯಗಳ ಮಹತ್ವ ಮತ್ತು ಉಪಯೋಗ’ದ ಬಗ್ಗೆ ವಿವರಿಸಿದರು.
ಹಿರಿಯ ವೈದ್ಯಾಧಿಕಾರಿ ವಾಹಿನಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಖಜಾನೆ ಅಧಿಕಾರಿ ಸುನೀಲ ಮೋಗಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವ ಕುಮಾರ್,ಶಿರಸಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಉಪಸ್ಥಿತರಿದ್ದರು. ಡಾ.ಯೋಗೇಶ ಮಡಗಾಂವಕರ ಸ್ವಾಗತಿಸಿದರು. ಮುಂಡಗೋಡದ ವೈದ್ಯಾಧಿಕಾರಿ ಡಾ.ಸಂಜೀವ ಕಾರ್ಯಕ್ರಮವನ್ನು ನಿರೂಪಿಸಿದರು.
ಅಪರೂಪದ ಗಿಡಮೂಲಿಕೆ ಪ್ರದರ್ಶನ
ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಅಪರೂಪದ ಗಿಡಮೂಲಿಕೆಗಳ ಪ್ರದರ್ಶನ ಗಮನ ಸೆಳೆಯಿತು. ಡೆಂಗ್ಯೂ, ಚಿಕನ್‌ಗುನ್ಯಾ, ಎಚ್1ಎನ್1 ರೋಗಗಳಿಗೆ ಆಯುರ್ವೇದಿಕ್ ಪರಿಹಾರ, ಹೆಣ್ಣುಮಕ್ಕಳ ಆರೋಗ್ಯ, ಅಪೌಷ್ಟಿಕತೆಯ ನಿವಾರಣೆಯಲ್ಲಿ ಆಯುರ್ವೇದಿಕ್ ಪಾತ್ರದ ಬಗ್ಗೆ ಪ್ರದರ್ಶನ ಇಡಲಾಗಿತ್ತು. ಹಾಗೆಯೇ ಆಧುನಿಕ ಜೀವನಶೈಲಿಯಿಂದಾಗುವ ತೊಂದರೆಗಳಿಗೆ ಆಯುರ್ವೇದದಿಂದ ಸಿಗುವ ಔಷಧ, ಸುಖಮಯ ವೃದ್ಧಾಪ್ಯ ಜೀವನಕ್ಕೆ, ಆಯುರ್ವೇದದ ಉಪಯುಕ್ತ ಗಿಡ ಮೂಲಿಕೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ವಿಷಮಂಗಲಿ ಗಿಡ, ಕರಂಜ, ರಾಶ್ಮೆ ಗಿಡ, ಶತಾವರಿ, ಮಧುನಾಶಿನಿ, ನಿರ್ಗುಂಡಿ, ಕಳ್ಳಂಗಡ್ಲೆ, ಕಿರಾತ ತಿಕ್ತ ಮುಂತಾದ ಔಷಧ ಸಸ್ಯಗಳಿದ್ದವು. ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.