ಮಗನೇ ಮನೆಯಿಂದ ಹೊರದಬ್ಬಿದ್ದರಿಂದ, ಮಂಗಳೂರಿಗೆ ಬಂದು ಅಲೆದಾಡುತ್ತಿದ್ದ ವ್ರದ್ಧನನ್ನು ಕಂಕನಾಡಿ ಠಾಣೆ ಪೊಲೀಸರು ಸುರಕ್ಷಿತವಾಗಿ ಮನೆಗೆ ಕಳುಹಿಸಿದರು.
ವ್ರದ್ಧ ರಾಜಗೋಪಾಲ್ ತಮಿಳುನಾಡಿನ ಸೇಲಂ ಬಳಿಯ ನಿವಾಸಿ. ಇವರಿಗೆ 74ವರ್ಷ ವಯಸ್ಸಾಗಿತ್ತು. ‘ಕೌಟುಂಬಿಕ ಕಲಹದಿಂದ ಬೇಸತ್ತಿದ್ದರು, ಮಗನು ಮನೆಯಿಂದ ಹೊರಹಾಕಿದ್ದ. ಇದೇ ಕೊರಗಿನಲ್ಲಿ ಗಂಟು ಮೂಟೆ ಕಟ್ಟಿಕೊಂಡು ಮಂಗಳೂರಿಗೆ ಬಂದಿದ್ದ’ ಎಂದು ಪೊಲೀಸ್ ಸಿಬ್ಬಂದಿ ರಮೇಶ್ ಕುಮಾರ್ ಮಾಹಿತಿ ನೀಡಿದರು.
‘ಕೆಲಸಕ್ಕಾಗಿ ಮಂಗಳೂರಿನ ಬೀದಿಯಲ್ಲಿ ಅಲೆಯುತ್ತಿದ್ದರು. ಆದರೆ ವಯಸ್ಸಾದ ಕಾರಣ ಯಾರೂ ಕೆಲಸ ನೀಡಲು ಮುಂದಾಗಲಿಲ್ಲ. ನಮ್ಮ ಗಮನಕ್ಕೆ ಬಂದಿದ್ದರಿಂದ ವಿಚಾರಣೆ ನಡೆಸಿ ಮಗನ ಬಳಿ ದೂರವಾಣಿ ಮೂಲಕ ಮಾತನಾಡಿದ್ದೇವೆ. ಮರಳಿ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ’ ಎಂದು ಅವರು ಹೇಳಿದರು.
ಶನಿವಾರ ತಡರಾತ್ರಿ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಿಂದ ಸುರಕ್ಷಿತವಾಗಿ ಅವರನ್ನು ಕಳುಹಿಸಲಾಗಿದೆ. ಪೊಲೀಸರೇ ಆರ್ಥಿಕ ಸಹಾಯ ಮಾಡಿ ಅಪ್ಪ-ಮಗನನ್ನು ಸೇರಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ.