ಕಾರವಾರ: ಎಡಬಿಡದೆ ಸುರಿದು ಜನತೆಯನ್ನು ಕಂಗೆಡಿಸಿದ್ದ ಮಳೆರಾಯ ಇದೀಗ ಸ್ವಲ್ಪ ಬಿಡುವು ನೀಡಿದ್ದಾನೆ. ಆದರೆ ಇದು ಮಳೆಯ ನಡುವಿನ ಅಂತರ ಅಷ್ಟೇ ಎಂಬಂತೆ ಒಂದು ಆಘಾತಕಾರಿ ಸುದ್ದಿ ಲಭ್ಯವಾಗಿದೆ.
‘ಕ್ಯಾರ್’ ಚಂಡಮಾರುತದ ಪ್ರಭಾವ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆಯ ಅಬ್ಬರ ತಗ್ಗಿದೆ. ಆದರೆ, ತಿಂಗಳಾಂತ್ಯಕ್ಕೆ ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಕಂಡು ಬರುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಅರಬ್ಬಿ ಸಮುದ್ರದಲ್ಲಿ ರೂಪಗೊಂಡಿರುವ ‘ಕ್ಯಾರ್’ ಚಂಡಮಾರುತದ ಪ್ರಭಾವ ಇದೀಗ ಕಡಿಮೆಯಾರುವುದರಿಂದ ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ತಗ್ಗಿದೆ. ಆದರೆ, ದಕ್ಷಿಣ ತಮಿಳುನಾಡು ಹಾಗೂ ಶ್ರೀಲಂಕಾ ಭಾಗದಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಿದೆ. ಅದು ಅ.29ರ ನಂತರ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿರುವುದು ಜನತೆಯನ್ನು ಮತ್ತೆ ಭಯದ ನೆರಳಿಗೆ ನೂಕಿದೆ.
ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಅ.29,30 ಹಾಗೂ 31ರಂದು ಹೆಚ್ಚಿನ ಮಳೆಯಾಗುವ ಸಾಧ್ಯತೆ ಕಂಡು ಬಡುತ್ತಿದೆ ಎನ್ನಲಾಗಿದೆ. ಈ ವಿಷಯ ಜನತೆಯ ನಿದ್ದೆಗೆಡಿಸಿರುವುದು ಮಾತ್ರ ಸುಳ್ಳಲ್ಲ.