ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ವಿಕಾರಿ ಸಂವತ್ಸರದ ಶಿವಗಂಗಾ ವಿವಾಹ ಮಹೋತ್ಸವವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಆಶ್ವೀಜ ಬಹುಳ ಚತುರ್ದಶಿ ದಿನ ವೈಭವದಿಂದ ಜರುಗಿತು .
ಶ್ರೀ ಕ್ಷೇತ್ರ ಗೋಕರ್ಣದ ವಿಶಾಲವಾದ ಮಹಾಬಲೇಶ್ವರ ಕಡಲ ತೀರದಲ್ಲಿ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತ ಜನರ ಸಮ್ಮುಖದಲ್ಲಿ ನಿಶ್ಚಯಿತ ವಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವಿವಾಹವಾದಳು.
ಕಡಲಿನ ಅಬ್ಬರ, ವಾದ್ಯಘೋಷ , ವೇದಘೋಷ, ವಿಶಿಷ್ಟ ತೋರಣ, ಗುಮಟೆಪಾಂಗ ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗನ್ನು ನೀಡಿದವು. ಭಕ್ತರು ಆರತಿ ನೀಡಿ ದೇವದಂಪತಿಗಳನ್ನು ಬರಮಾಡಿಕೊಂಡರು . ಗಂಗೆಯೊಂದಿಗಿನ ತನ್ನ ವಿವಾಹ ಮಹೋತ್ಸವಕ್ಕೆ ಸಾಗರದಂಚಿನ ಆಗಸದಲ್ಲಿ ಲಿಂಗರೂಪದಲ್ಲಿ ಸಾಕ್ಷಿಯಾದ ಮಹಾಬಲನನ್ನು ಭಕ್ತರು ಕಣ್ತುಂಬಿಕೊಂಡರು .
ವಿವಾಹ ಮಹೋತ್ಸವದ ನಂತರ ಶಿವ -ಗಂಗೆಯರು ಶ್ರೀ ದೇವಾಲಯದ ‘ಅಮೃತಾನ್ನ’ ಭೋಜನ ಶಾಲೆಗೆ ಚಿತ್ತೈಸಿ ದೇವರಾಜೋಪಚಾರ ಪೂಜೆ ಸ್ವೀಕರಿಸಿದರು. ಆನಂತರ ಪ್ರಸಾದ ವಿತರಣೆ ನಡೆಯಿತು . ಉಪಾಧಿವಂತ ಮಂಡಲದ ಸದಸ್ಯರು, ಊರ ನಾಗರಿಕರು, ಎಲ್ಲ ಸಮಾಜದ ಬಂಧುಗಳು ಉಪಸ್ಥಿತರಿದ್ದರು .ವೇ ಶಿತಿಕಂಠ ಹಿರೇಭಟ್ ಪೂಜಾ ಕೈಂಕರ್ಯ ನೆರವೇರಿಸಿದರು . ಆರಕ್ಷಕ ಇಲಾಖೆಯಿಂದ ಸೂಕ್ತ ರಕ್ಷಣೆಯ ಸಹಕಾರ ಒದಗಿಸಲಾಗಿತ್ತು .