ಕಾರವಾರ: ನಗರದಲ್ಲಿ ಭಾನುವಾರ ಬೆಳಿಗ್ಗೆ ಈದ್ ಮಿಲಾದ್ ಹಬ್ಬದ ಸಂಭ್ರಮ ತುಂಬಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ ಮುಸ್ಲಿಮರು, ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸಿದರು.
ತಮ್ಮ ಮನೆಗಳಲ್ಲಿ ಹಾಗೂ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಶುಭಾಶಯ ಕೋರಿದರು.
ಅದ್ಧೂರಿ ಮೆರವಣಿಗೆ:
ನಗರದ ಹಬ್ಬುವಾಡ ರಸ್ತೆಯಿಂದ ಆರಂಭವಾದ ಮೆರವಣಿಗೆ ಸವಿತಾ ವೃತ್ತ, ಗ್ರೀನ್ ಸ್ಟ್ರೀಟ್ ಮೂಲಕ ಸಾಗಿ ಕೋಡಿಬಾಗದಲ್ಲಿ ಕೊನೆಯಾಯಿತು. ಧ್ವನಿವರ್ಧಕಗಳಲ್ಲಿ ಘಜಲ್ ಗಾಯನ ಹಾಗೂ ಅದರ ಹಿಂದೆ ಸಾಗಿಬಂದ ಮೆಕ್ಕಾ, ಮದೀನಾಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು.
ನೂರಾರು ಮಂದಿ ಸೇರಿದ್ದ ಈ ಮೆರವಣಿಗೆಯಲ್ಲಿ ಮಕ್ಕಳು ವಿಶೇಷವಾಗಿ ಗಮನ ಸೆಳೆದರು. ಹೊಸ ಬಟ್ಟೆ ಧರಿಸಿ, ಮುಸ್ಲಿಂ ಧರ್ಮದ ಧ್ವಜವನ್ನು ಹಿಡಿದುಕೊಂಡು ಸಾಗುತ್ತಿದ್ದುದು ಕಂಡುಬಂತು. ನೂರಾರು ಯುವಕರು ದ್ವಿಚಕ್ರ ವಾಹನಗಳಲ್ಲಿ ಸಾಗಿಬಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಹಾಗೂ ಇತರರು ಗಣಪತಿ ದೇವಸ್ಥಾನದ ಬಳಿ ನಿಂತು ಶುಭಾಶಯ ಕೋರಿದರು.