`ಕವಿತೆಯೆಂಬುದು ಲೋಕ ಶಿಕ್ಷಕ ಅಲ್ಲ. ಅದು ಮನೆಯಂಗಳದ ಮಹಾಪ್ರಸ್ಥಾನ. ಹಾಗಾಗಿಯೇ ಸಮಾಜ ಕವಿಗಳನ್ನು ಎಲ್ಲಾ ಕಾಲದಲ್ಲಿಯೂ ಗಂಭೀರವಾಗಿಯೇ ಪರಿಗಣಿಸಿದೆ’ ಎಂದು ಹಿರಿಯ ಸಾಹಿತಿ, ವೈದ್ಯೆ ಡಾ.ಎಚ್.ಎಸ್.ಅನುಪಮಾ ಕವಲಕ್ಕಿ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಎಸ್.ಡಿ.ಎಂ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹೊನ್ನಾವರ ಹಾಗೂ ಕನ್ನಡ ಸಂಘ, ಎಸ್.ಡಿ.ಎಂ ಪದವಿ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ತಾಲೂಕಾ ಮಟ್ಟದ `ಕಾವ್ಯ ಶ್ರಾವಣ’ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕವಿತೆಯಲ್ಲಿ ಪ್ರಾಸ ಸಹಜವಾಗಿ ಬರಬೇಕು. ಅದಕ್ಕಾಗಿ ನಾವು ತಿಣುಕಬಾರದು. ಕವಿತೆ ಬರೆಯುವ ಕವಿಗೆ ಸ್ವಾತಂತ್ರ್ಯ ಇದ್ದೇ ಇದೆ. ಕವಿತೆ ಕೇವಲ ವಾದವಲ್ಲ. ಕವಿತೆಯಲ್ಲಿ ವಸ್ತು ಇರಬಾರದು. ವರ್ಣನೆ ಇರಬೇಕು. ಕವಿಯಾದವ ಕವಿತೆಯ ಭಾಷಿಕ ವಿನ್ಯಾಸದ ಬಗ್ಗೆಯೂ ಕೂಡ ಗಮನಹರಿಸಬೇಕು. ಗದ್ಯ ನಡಿಗೆಯಿದ್ದಂತೆ, ಪದ್ಯ ನರ್ತನವಿದ್ದಂತೆ. ಪದ್ಯ ಹುಟ್ಟುತ್ತದೆ, ಕಥೆ ಕಟ್ಟುತ್ತವೆ. ನಮ್ಮೊಳಗೆ ವಿನಯ ರೂಢಿಸಿ, ವಿಸ್ಮಯ ಮೂಢಿಸಿ ವೈಖರಿ ಹುಟ್ಟಿಸಿ ಅಹಂಕಾರ ಬರದಂತೆ ಕಾಯುವುದೇ ಕವಿತೆ. ಅಂಥಹ ಕವಿತೆ ಹುಟ್ಟುವವರೆಗೆ ಕವಿ ಕಾಯಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ ಇಂದು ನಾವು ತುಂಬಾ ಯಾಂತ್ರಿಕವಾಗಿ ಬದುಕುತ್ತಿದ್ದೇವೆ. ಟಿವಿಯಲ್ಲಿ ಕಾಣಿಸಿಕೊಳ್ಳುವುದು ಯಶಸ್ಸು. ಆದರೆ ದುರಂತವೆಂಬಂತೆ ಎಲ್ಲರೂ ಸಿಸಿಟಿವಿಯಲ್ಲೇ ಕಾಣಿಸಿಕೊಳ್ಳುವಂತಾಗಿದೆ. ನಮ್ಮ ಸಾಹಿತ್ಯದ ಮೂಲ ಸೆಲೆಯಿರುವುದು ಜನಪದದಲ್ಲಿ. ಅದನ್ನು ಉಳಿಸಿಕೊಳ್ಳಬೇಕು. ಕವಿಗಳೂ, ಸಾಹಿತಿಗಳೂ ಪ್ರತಿಷ್ಠೆಯ ಕಾಳಗವನ್ನು ನಿಲ್ಲಿಸಿ ಓದಿನೊಂದಿಗೆ ಮುಖಾ-ಮುಖಿಯಾಗಬೇಕು ಎಂದರು.
ಪ್ರಾಚಾರ್ಯರಾದ ಪ್ರೊ.ಎಸ್.ಎಸ್.ಹೆಗಡೆ ಮಾತನಾಡಿ ಎಸ್.ಡಿ.ಎಂ ಪದವಿ ಕಾಲೇಜಿಗೆ ಸಾಹಿತ್ಯಿಕ ಪರಂಪರೆಯಿದೆ. ಇಲ್ಲಿನ ವಿದ್ಯಾರ್ಥಿಗಳು ಸಾಕಷ್ಟು ಪ್ರತಿಭಾವಂತರಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ಅವಕಾಶ ದೊರೆತರೆ ಅವರು ಅಸಾಧ್ಯವಾದುದನ್ನೂ ಸಾಧಿಸಬಲ್ಲರು. ಸಾಹಿತ್ಯ ವ್ಯಕ್ತಿಯಲ್ಲಿ ಸೌಜನ್ಯವನ್ನು ಮೂಡಿಸಬೇಕು ಎಂದರು.
ನಂತರ ನಡೆದ ಕಾವ್ಯ ಶ್ರಾವಣ ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಮಹಾದೇವಿ ಭಟ್ಟ, ಶೃತಿ ಹೆಗಡೆ, ಜ್ಯೋತಿ ಡಿಸೋಜಾ, ವಿನುತಾ ನಾಯ್ಕ, ಕೃಷ್ಣಾ ಭಾಗ್ವತ್, ಆರ್ಯಶ್ರೀ ಹರಿಕಂತ್ರ ಕವಿತೆ ವಾಚಿಸಿದರು.
ತಾಲೂಕಿನ ಅನೇಕ ಹಿರಿ-ಕಿರಿಯ ಕವಿಗಳು ತಾವು ರಚಿಸಿದ ಕವಿತೆಗಳನ್ನು ವಾಚಿಸುವುದರ ಮೂಲಕ ಶ್ರಾವಣದ ಸಂಭ್ರಮ ಅನುಭವಿಸಿದರು. ಪ್ರೊ.ಪ್ರಶಾಂತ ಹೆಗಡೆ ಮೂಡಲಮನೆ ನಿರೂಪಿಸಿದರು. ಕುಮಾರಿ ಸಂಗೀತ ನಾಯ್ಕ ಭಾವಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು. ಕನ್ನಡ ಸಂಘದ ಸಂಚಾಲಕಿ ಕುಮಾರಿ ಅಶ್ವಿನಿ ಭಟ್ಟ ಉಪಸ್ಥಿತರಿದ್ದರು. ಕಸಾಪ ಅಧ್ಯಕ್ಷ ಪ್ರೊ.ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಶಾರದಾ ಭಟ್ಟ ಸ್ವಾಗತಿಸಿದರು. ಪ್ರೊ.ವಿದ್ಯಾಧರ ನಾಯ್ಕ ವಂದಿಸಿದರು.

RELATED ARTICLES  ಫ್ಲೈ ಓವರ್ ಗೆ ಡಿಕ್ಕಿಕೊಡೆದು ಸುಟ್ಟು ಕರಕಲಾದ ಕಾರು.