ಕುಮಟಾ: “ಪ್ರಕೃತಿಯನ್ನು ವಿಕೃತಿಯನ್ನಾಗಿಸಬಾರದು. ಪರಿಸರವನ್ನು ಸುಸ್ಥಿರವಾಗಿ ಮಾಡಬೇಕು ಬೀಳುವ ಮಳೆಯನ್ನು ಸಂಗ್ರಹಿಸಿ ಅಂತರ್ಜಲ ಹೆಚ್ಚಿಸುವಂತೆ ಮಾಡಬೇಕು ಶೇಕಡಾ 50% ರಷ್ಟಾದರೂ ನೀರು ಇಂಗಿಸಲು ಪ್ರಯತ್ನಿಸಬೇಕು” ಎಂದು ಸೀತಾರಾಮ ಶೆಟ್ಟಿ ನಿವೃತ್ತ ಪ್ರಾಂಶುಪಾಲರು ಬಾರ್ಕೂರು ನುಡಿದರು.

ಭಾರತೀಯ ವಿಕಾಸ ಟ್ರಸ್ಟ ಮಣಿಪಾಲ,ಸಂಗಮ ಸೇವಾ ಸಂಸ್ಥೆ(ರಿ)ಹೊನ್ನಾವರ,ಸ್ಪಂದನ ಪೌಂಡೇಶನ್ ಹಿರೇಗುತ್ತಿ, ಇಕೋಕ್ಲಬ್, ವಿಜ್ಞಾನ ಸಂಘ ಹಾಗೂ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಮಳೆನೀರು ಕೊಯ್ಲು, ಸೌರ ವಿದ್ಯುತ್ ಹಾಗೂ ಔಷಧಿ ಸಸ್ಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಶ್ರೀ ಮನೋಹರ ಕಟಗೇರಿ ವ್ಯವಸ್ಥಾಪಕರು, ಭಾರತೀಯ ವಿಕಾಸ ಟ್ರಸ್ಟ, ಮಣಿಪಾಲ ಇವರು ಮಾತನಾಡಿ “ಇಂದಿನ ದಿನದಲ್ಲಿ ಪರ್ಯಾಯ ಇಂಧನ ಅವಶ್ಯಕತೆಯಿದೆ ಅದುವೇ ಸೋಲಾರ್. ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ. ಬರಿದಾಗುವ ಇಂಧನದಿಂದ ದೂರವಿದ್ದು ಸೋಲಾರ್‍ನ್ನು ಹೆಚ್ಚು ಹೆಚ್ಚು ಬಳಸಿ”. ಎಂದು ಇವರು ಸೋಲಾರ್ ಬಗ್ಗೆ ಉಪನ್ಯಾಸ ಮಾಡಿದರು.

RELATED ARTICLES  ಸ್ವರಾತ್ಮಿಕಾ ಸಂಗೀತ ಶಾಲೆಯಲ್ಲಿ "ಹಾಗೆ ಸುಮ್ಮನೆ ಹಾಡೋಣ" ಕಾರ್ಯಕ್ರಮ ಯಶಸ್ವಿ.

ಶ್ರೀ ಎಂ.ಎಂ ರಾವ್ ನಿವೃತ್ತ ಮೆನೇಜರ್ ಸಿಂಡಿಕೇಟ್ ಬ್ಯಾಂಕ್ ಇವರು ಮಾತನಾಡಿ “ಆರೋಗ್ಯವೇ ಭಾಗ್ಯ ಎನ್ನುವಂತೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಔಷಧಿ ಸಸ್ಯಗಳ ಪ್ರಾತ್ಯಕ್ಷಿತೆಯನ್ನು ಅತ್ಯಂತ ಸರಳವಾಗಿ ಮನೆಯ ಸುತ್ತಮುತ್ತಲಿನಲ್ಲಿರುವ ಗಿಡಗಳ ಕುರಿತು ಅವುಗಳ ಉಪಯೋಗದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು”.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ಶ್ರೀ ರೋಹಿದಾಸ ಗಾಂವಕರ “ಇಂದಿನ ದಿನದಲ್ಲಿ ಮಳೆನೀರು ಕೊಯ್ಲು ಅತ್ಯಂತ ಪರಿಣಾಮಕಾರಿಯಾಗಿದೆ. ಸೋಲಾರ್ ಬಳಸಿ ಇಂಧನವನ್ನು ಉಳಿಸಿ ಮತ್ತು ನಮ್ಮ ಹಿತ್ತಲ ಗಿಡಗಳ ಔಷಧಿ ಗುಣವಿರುವ ಸಸ್ಯಗಳನ್ನು ಉಪಯೋಗಿಸಿ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳೋಣ”. ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್ ರಾಮು ಹಿರೇಗುತ್ತಿ ಇವರು “ನೀರಿನ ಅಭಾವದಿಂದ ತತ್ತರಿಸಿದ ನಮಗೆ ಮಳೆ ನೀರು ಕೊಯ್ಲು ಒಂದು ವರದಾನ. ಜೀವರಾಶಿಯ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಮಣ್ಣು & ನೀರಿನ ವೈಜ್ಞಾನಿಕ ಸಂರಕ್ಷಣೆಗೆ ಪ್ರಾಧಾನ್ಯತೆ ನೀಡುತ್ತಿದೆ ಪರ್ಯಾಯ ಇಂಧನದ ಅಗತ್ಯತೆ ಅನಿವಾರ್ಯ”. ಎಂದು ತಿಳಿಸಿದರು.

RELATED ARTICLES  ತವರಿಗೆ ಹೋದ ಹೆಂಡತಿ ವಾಪಸ್ ಬಂದಿಲ್ಲವೆಂದು ಮನನೊಂದ ಪತಿ ಆತ್ಮಹತ್ಯೆ


ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ರವೀಂದ್ರ ಶೆಟ್ಟಿ ಸಂಘಟಕರು, ಸಂಗಮ ಸೇವಾ ಸಂಸ್ಥೆ ಹೊನ್ನಾವರ, ಶಿಕ್ಷಕರಾದ ಶ್ರೀ ವಿಶ್ವನಾಥ ಬೇವಿನಕಟ್ಟಿ, ಶ್ರೀ ಬಾಲಚಂದ್ರ ಹೆಗಡೇಕರ, ನಾಗರಾಜ ಜಿ ನಾಯಕ, ಜಾನಕಿ ಗೊಂಡ, ಮಹಾದೇವ ಗೌಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಕವಿತಾ ಅಂಬಿಗ ಉಪಸ್ಥಿತರಿದ್ದರು.

ಕಾರ್ಯಕ್ರಮವು ಶ್ವೇತಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶಾಲೆಯ ವಿದ್ಯಾರ್ಥಿ ಶಿವರಾಜ ನಾಯಕ ಸ್ವಾಗತಿಸಿದರು, ವಿದ್ಯಾರ್ಥಿ ಸಹನಾ ಗಾಂವಕರ ಕಾರ್ಯಕ್ರಮ ನಿರೂಪಣೆ ಮಾಡಿದರು, ವಿದ್ಯಾರ್ಥಿ ಶ್ರೀದೇವಿ ಹಳ್ಳೇರ ವಂದಿಸಿದರು.
ವರದಿ:ಎನ್ ರಾಮು ಹಿರೇಗುತ್ತಿ