ಸಮಾಜವು ತಿರಸ್ಕರಿಸಿ ನಿರ್ಗತಿಕರಾದವರಿಗೆ ಉತ್ತಮ ಬದುಕು ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಿನ ಅಬ್ರಿಮನೆಯಲ್ಲಿ ನೂತನವಾಗಿ ವೃದ್ಧಾಶ್ರಮ, ಅನಾಥಾಶ್ರಮ ಕಾರ್ಯನಿರ್ವಹಿಸಲಿದೆ. ಈ ಸಂಬಂಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಿರಸಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು.
ಉತ್ತರ ಕನ್ನಡ ಮೂಲದ ಲತಿಕಾ ಭಟ್ಟ ಎನ್ನುವರು ನಡೆಸುತ್ತಿರುವ ಸುಯೋಗ ಪೌಂಡೇಶನ್ ವತಿಯಿಂದ ಸುಯೋಗಾಶ್ರಮ ಎನ್ನುವ ಹೆಸರಿನಲ್ಲಿ ಆಶ್ರಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆಶ್ರಮದ ಕಟ್ಟಡ ಕಾಮಗಾರಿಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಲತಿಕಾ ಭಟ್ಟ ಅವರ ತಂದೆ ಕೆ.ವಿ.ಭಟ್ಟ, ಸ್ಥಳೀಯರಾದ ಎಂ.ಎನ್.ಹೆಗಡೆ, ಭಾಸ್ಕರ ಹೆಗಡೆ, ವಸಂತ ಹೆಗಡೆ ಶಿಲಾನ್ಯಾಸ ನೆರವೇರಿಸಿದರು.
ಆಶ್ರಮದ ಮುಖ್ಯಸ್ಥೆ ಲತಿಕಾ ಭಟ್ಟ ಮಾಹಿತಿ ನೀಡಿ, ಉತ್ತರ ಕನ್ನಡ ಜಿಲ್ಲೆಯವಳಾದ ನಾನು ಬೆಳಗಾವಿಯಲ್ಲಿ ನೆಲೆಸಿ ಅಲ್ಲಿ ಮೂರು ವರ್ಷಗಳಿಂದ ವೃದ್ಧಾಶ್ರಮವನ್ನು ನಡೆಸುತ್ತಿದ್ದೇನೆ. ಅದರ ಜೊತೆಯಲ್ಲಿ ಬಾಗಲಕೋಟೆಯಲ್ಲಿಯೂ ಸಹ ವೃದ್ಧಾಶ್ರಮವನ್ನು ನಡೆಸಲಾಗುತ್ತಿದೆ. ಆದರೆ ನನ್ನ ಜಿಲ್ಲೆಯಲ್ಲಿ ವೃದ್ಧಾಶ್ರಮವನ್ನು ಮಾಡಬೇಕು ಎನ್ನುವುದು ನನ್ನ ಕನಸಾಗಿದ್ದು, ಇಲ್ಲಿ ಜಾಗ ಖರೀದಿಸಿ ಅನಾಥಾಶ್ರಮ, ವೃದ್ಧಾಶ್ರಮ ಕಟ್ಟಲಾಗುತ್ತಿದೆ. ಯಾರಿಗೆ ಇದರ ಅವಶ್ಯಕತೆಯಿದೆಯೋ ಅವರಿಗೆ ಒಳ್ಳೆಯ ಜೀವನವನ್ನು ನೀಡಬೇಕು ಎನ್ನುವುದು ನನ್ನ ಆಸೆಯಾಗಿದೆ ಎಂದರು. ಪ್ರಸ್ತುತ ನಡೆಸುತ್ತಿರುವ ಆಶ್ರಮದಲ್ಲಿ 50 ಜನರಿದ್ದು, ಅದರಲ್ಲಿ 15 ಮಕ್ಕಳು ಹಾಗೂ 35 ವಯೋವೃದ್ದರಿದ್ದಾರೆ. ಇಲ್ಲಿ ಕಟ್ಟಡವಾದ ಮೇಲೆ ಅವರನ್ನು ಇಲ್ಲಿಯೇ ಕರೆತರಲಾಗುವುದು. ಜೊತೆಗೆ ಇಲ್ಲಿ ಯಾರಿಗೆ ಅವಶ್ಯಕತೆಯಿದರೋ ಅವರಿಗೆ ಆಶ್ರಯ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಟುಕರಿಂದ ರಕ್ಷಿಸ್ಪಟ್ಟ ಗೋವುಗಳನ್ನು ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ಅಂತಹ ಗೋವುಗಳ ರಕ್ಷಣೆಗಾಗಿ ಅನಾಥಾಶ್ರಮ ಹಾಗೂ ವೃದ್ಧಾಶ್ರಮದ ಜೊತೆಯಲ್ಲಿ ಗೋ ಶಾಲೆಯನ್ನೂ ಸಹ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕಳೆದ ಮೂರು ವರ್ಷಗಳಿಂದ ವೃದ್ಧಾಶ್ರಮ ನಡೆಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಇವರು ಅನೇಕರಿಗೆ ನೆಲೆಯಾಗಿದ್ದಾರೆ. ಈ ರೀತಿಯ ಸಮಾಜ ಸೇವೆಯನ್ನು ಹಾಗೂ ಚಿಂತನೆಯನ್ನು ಮಾಡುವವರಿಗೆ ಪ್ರೋತ್ಸಾಹದ ಅಗತ್ಯವಿದೆ. ಇಂತಹ ಕೆಲಸ ಸಮಾಜಕ್ಕೆ ಮಾದರಿಯಾಗಬೇಕು ಎಂದರು.