ಬೆಂಗಳೂರು: ಗುರುವಿನ ಬದುಕು ಸಾಮಾನ್ಯವಾದ್ದಲ್ಲ, ಸಾವಿರಾರು ಜೀವಿಗಳ ಬದುಕಿನ ಉದ್ಧಾರ ಮಾಡುವುದರಿಂದ ಗುರುವು ಯಾವಾಗಲೂ ಮೃತನಾಗುವುದಿಲ್ಲ, ಅಮೃತನಾಗುತ್ತಾನೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.  


ಗಿರಿನಗರದ ಪುನರ್ವಸು ಭವನದಲ್ಲಿ ಬುಧವಾರ 35ನೇ ಯತಿವರೇಣ್ಯರಾದ ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ ಹಾಗೂ ಪಾಂಡಿತ್ಯ ಪುರಸ್ಕಾರದ ಧರ್ಮಸಭೆಯಲ್ಲಿ ಆಶೀರ್ವಾಚನ ನೀಡಿ ಗುರುವು ದೇವರ ಪ್ರತಿನಿಧಿಯಾಗಿ ಜೀವಲೋಕದಲ್ಲಿ ಸಂಚಾರ ಮಾಡಿ ಜೀವಗಳನ್ನು ದೇವತ್ವಕ್ಕೆ ಎತ್ತುವ ಕಾಯಕವನ್ನು ಮಾಡುವ ಅವರ ಜೀವನವು ವಿಶಿಷ್ಟ, ಅವರ ಇಹಲೋಕ ತ್ಯಾಗವೂ ವಿಶಿಷ್ಟವೇ ಆಗಿದೆ. ಗುರುವಿನ ಸಾವು ಘೋರವಲ್ಲ, ಗುರುವಿನ ಸಮಾಧಿಯು ಘೋರಿಯಲ್ಲ ಯಾಕೆಂದರೆ ಸಾವು ಅಮೃತತ್ವ ಗುರುವಿನ ಸಮಾಧಿಯು ನಿತ್ಯ ದರ್ಶನ ಹಾಗೂ ಪೂಜೆಗೆ ಯೋಗ್ಯವಾದ್ದರಿಂದ ಭಕ್ತರ ಉದ್ಧಾರವಾಗುತ್ತದೆ. ಆರಾಧನೆ ಎಂದರೆ ಗುರುಗಳು ಎಲ್ಲೂ ಹೋಗದೆ ಸರ್ವಾಂತರ್ಯಾಮಿಯಾಗಿ, ಸರ್ವವ್ಯಾಪಿಯಾಗಿ ಇದ್ದು ಆ ದಿನ ಬಂದಾಗ ನಮಗೆ ಅಭಿವ್ಯಕ್ತರಾಗಿ ವಿಶೇಷ ಅನುಗ್ರಹವನ್ನು ಮಾಡುತ್ತಾರೆ ಎಂದು ಹೇಳಿದರು.

RELATED ARTICLES  ಭಗವದ್ಗೀತೆಯ ಒಂದು ಅಧ್ಯಯವನ್ನಾದರೂ ಓದಿ : ಎಂ.ಎನ್.ಹೆಗಡೆ


ಸಾಮಾನ್ಯ ವ್ಯಕ್ತಿಗೆ ಶ್ರಾದ್ಧ ಮಾಡುವುದು ಆ ಜೀವಕ್ಕೆ ಒಳ್ಳೆದು ಮಾಡುವಂತದ್ದು, ಆರಾಧನೆ ಎನ್ನುವುದು ಸಮಾಜದ ಹಾಗೂ ನಮ್ಮ ಶ್ರೇಯಸ್ಸಿಗಾಗಿ, ನಮಗೆ ಒಳ್ಳೆಯದಾಗಲಿ ಎಂದು, ಗುರುಗಳ ಶ್ರೇಯಸ್ಸಿಗೋಸ್ಕರ ಅಲ್ಲ ಅವರು ಪರಿಪೂರ್ಣ ಶ್ರೇಯಸ್ಸಿನಲ್ಲಿಯೇ ನೆಲೆಸಿದ್ದಾರೆ. ಶ್ರೀರಾಘವೇಂದ್ರಭಾರತೀಗಳು ಮಹಾಪಂಡಿತರಾಗಿದ್ದು, ಅವರು ವಿದ್ಯೆ ಹಾಗೂ ವ್ಯವಹಾರದಲ್ಲಿ ಗಟ್ಟಿತನವನ್ನು ಹೊಂದಿದ್ದರು. ಮಠಕ್ಕೆ ವೈದಿಕರು, ವಿದ್ವಾಂಸರು ಬಂದರೆ ಪರೀಕ್ಷೆಗಳನ್ನು ಮಾಡುವುದರ ಜತೆಗೆ ಪುಸ್ತಕವೇ ಮಸ್ತಕಕ್ಕೆ ಬರಬೇಕು ಎನ್ನುತ್ತಿದ್ದರು. ವ್ಯವಹಾರದಲ್ಲಿಯೂ ಅಷ್ಟೇ ನಿಷ್ಣಾತರಾಗಿದ್ದರು ಮಠದಲ್ಲಿ ಎಷ್ಟು ಉತ್ಪತ್ತಿ, ಏನು ನಷ್ಟವಿದೆ ಎಂಬುದು ಅವರಿಗೆ ಗೊತ್ತಿತ್ತು. ಅಲ್ಲದೇ ಅನುಷ್ಠಾನ, ತಪಸ್ಸಿನ ಬಲವನ್ನು ಹೊಂದಿದ್ದರಿಂದ ತ್ರಿಪಠಿಯಾಗಿ ತ್ರಿವೇಣಿ ಸಂಗಮವಾಗಿದ್ದರು ಎಂದು ಬಣ್ಣಿಸಿದರು.

RELATED ARTICLES  ಡಾ. ಶಶಿಭೂಶಣ ಹೆಗಡೆಯವರಿಂದ 2 ಲಕ್ಷ ದೇಣಿಗೆ


ಪಾಂಡಿತ್ಯ ಪುರಸ್ಕಾರ ಉದ್ಘೋಷ: ಬ್ರಹ್ಮೈಕ್ಯ ಶ್ರೀರಾಘವೇಂದ್ರಭಾರತೀ ಸ್ವಾಮೀಜಿಯವರ ಆರಾಧನೆಯ ದಿನದಂದು ನೀಡುವ ಶ್ರೀರಾಘವೇಂದ್ರಭಾರತೀ ಪಾಂಡಿತ್ಯ ಪುರಸ್ಕಾರವನ್ನು ತಮಿಳುನಾಡು ಮೂಲದ ಯಜುರ್ವೇದ ಆಚಾರ್ಯ ವೇದಬ್ರಹ್ಮಶ್ರೀ ಜಂಬೂನಾಥನ್ ಘನಪಾಠಿಗಳಿಗೆ ಉದ್ಘೋಷಿಸಲಾಯಿತು.


ವಿದ್ವಾನ್ ರಾಘವೇಂದ್ರ ಭಟ್ ಕ್ಯಾದಗಿ ಪ್ರಸ್ತಾವನೆಗೈದರೆ, ಧರ್ಮಕರ್ಮ ವಿಭಾಗದ ಶ್ರೀಸಂಯೋಜಕ ಕೂಟೇಲು ರಾಮಕೃಷ್ಣ ಭಟ್ ಪಾಂಡಿತ್ಯ ಪುರಸ್ಕ್ರತರಾದ ಜಂಬೂನಾಥನ್ ಘನಪಾಠಿಗಳ ಪರಿಚಯ ವಿವರಿಸಿದರು. ಬೆಳಗ್ಗೆ ಆರಾಧನೆಯ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಧರ್ಮಸಭೆಯಲ್ಲಿ ಶ್ರೀಮಠದ ಸಮ್ಮುಖಸರ್ವಾಧಿಕಾರಿಗಳಾದ ತಿಮ್ಮಪ್ಪಯ್ಯ ಮಡಿಯಾಲ್, ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಗಣೇಶ್ ಭಟ್ ಹಾಗೂ ಶ್ರೀಮಠದ ಪದಾಧಿಕಾರಿಗಳು ಭಾಗವಹಿಸಿದ್ದರು.