ಕುಮಟಾ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಡಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ತಾಲೂಕಾ ಮಟ್ಟದ ಯುವ ಸಂಸತ್ತಿನ ಕಾರ್ಯಕಲಾಪಗಳ ಅಣಕು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮುಖ್ಯಾಧ್ಯಾಪಕ ಎನ್.ಆರ್.ಗಜು ಸಂಸತ್ತನ್ನು ಉದ್ಘಾಟಿಸಿ, ‘ದೇಶದ ಭಾವೀ ಪ್ರಜೆಗಳಾಗುವ ಇಂದಿನ ವಿದ್ಯಾರ್ಥಿಗಳು ಭವಿಷ್ಯದ ಭವ್ಯ ಭಾರತವನ್ನು ಕಟ್ಟಲು ಅಣಿಗೊಳ್ಳುವಂತಾಗಲು ಸಂಸತ್ತಿನ ಕಾರ್ಯವ್ಯಾಪ್ತಿ, ವಿಸ್ತಾರ ಹಾಗೂ ಅಧಿನಿಯಮಗಳನ್ನು ಅರಿತಿರಬೇಕು’ ಎಂದರು. ಸ್ವಾರ್ಥ ಲಾಲಸೆ ಬದಿಗಿಟ್ಟು, ಎಲ್ಲ ಜನಪ್ರತಿನಿಧಿಗಳು ಅಭಿವೃದ್ಧಿಯನ್ನು ಮಾತ್ರ ಮಾನದಂಡವಾಗಿ ಸ್ವೀಕರಿಸಿದಾಗ ದೇಶ ಪ್ರಗತಿಯತ್ತ ದಾಪುಗಾಲು ಹಾಕುತ್ತದೆ ಎಂದು ಸೂಚ್ಯವಾಗಿ ಪ್ರಸ್ತುತ ರಾಜಕೀಯ ವ್ಯವಸ್ಥೆಯ ಸ್ಥಿತ್ಯಂತರಕ್ಕೆ ವಿಷಾದಿಸಿದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಾಜ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ, ದೀವಗಿ ಪ್ರೌಢಶಾಲಾ ಮುಖ್ಯಾಧ್ಯಾಪಕ ದಯಾನಂದ ದೇಶಭಂಡಾರಿ ‘ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರನ್ನು ಅರಿತು ನಡೆದಾಗ ಯೋಗ್ಯ ಸಂಸದೀಯ ಪಟುವಾಗಿ ಹೊರಬರಲು ಸಾಧ್ಯವಾಗುತ್ತದೆ’ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಿಂದ ಆಗಮಿಸಿದ ದೈಹಿಕ ಶಿಕ್ಷಣ ಪರಿವೀಕ್ಷಕ ವಿಠೋಬ ನಾಯಕ ‘ಅಣಕು ಯುವ ಸಂಸತ್ತು, ವಿದ್ಯಾರ್ಥಿ ನಾಯಕರನ್ನು ಹುಟ್ಟುಹಾಕಬಲ್ಲದು’ ಎಂದು ಅಭಿಪ್ರಾಯಪಟ್ಟರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಜಯಶ್ರೀ ಪಿ.ಎ., ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಮಹತ್ವವಾದುದೆಂದು ಸಾರಿದರಲ್ಲದೇ, ನೀಡುವ ಒಂದು ಮತ ಯೋಗ್ಯರಿಗೆ ದಕ್ಕುವಂತಾದಾಗ ಮಾತ್ರ ಉತ್ತಮ ಸಂಸತ್ ಪಟುವನ್ನು ಆಯ್ಕೆಮಾಡಲಾಗುತ್ತದೆ ಎಂದರು.

RELATED ARTICLES  ದಿನಕರ ಶೆಟ್ಟಿ ಜೊತೆಗೂಡಿದ ಹಲವು ಮುಖಂಡರು.

ಬಿ.ಆರ್.ಸಿ. ರೇಖಾ ನಾಯ್ಕ ಉಪಸ್ಥಿತರಿದ್ದು ಕಾರ್ಯಕಲಾವ ವೀಕ್ಷಿಸಿದರು. ಪ್ರಾರಂಭದಲ್ಲಿ ಮುಕ್ತಾ ಭಟ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಮಾಜ ವಿಜ್ಞಾನ ಶಿಕ್ಷಕ ಪ್ರದೀಪ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಮಾಜ ಶಿಕ್ಷಕರ ಸಂಘದ ಕಾರ್ಯದರ್ಶಿ ವಿಜಯಕುಮಾರ ನಾಯ್ಕ ನಿರೂಪಿಸಿದರು. ಶಿಕ್ಷಕ ವಿಷ್ಣು ಭಟ್ಟ ವಂದಿಸಿದರು. ಪ್ರಮುಖವಾಗಿ ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಆತಂಕ; ಕಾನೂನು ಬಿಗಿಗೊಳಿಸಿ; ಅವರನ್ನು ಗಲ್ಲಿಗೇರಿಸಬೇಕೆಂಬ ಕೂಗು ಜೋರಾಗಿತ್ತು! ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಆತಂಕ, ಸರ್ಕಾರದ ಕಳಪೆ ಸೈಕಲ್ ಪೂರೈಕೆ, ಅಸಮರ್ಪಕ ಪುಸ್ತಕ ವಿತರಣೆ, ಕುಲಗೆಟ್ಟ ಪುರಸಭಾ ರಸ್ತೆಗಳು, ಕಳಪೆ ಒಳಚರಂಡಿ ಕಾಮಗಾರಿ, ಅಕ್ರಮ ಮರಳು ಸಾಗಾಣಿಕೆ ಮೊದಲಾದ ವಿಷಯಗಳ ಬಗ್ಗೆ ಪ್ರಗತಿ ವಿದ್ಯಾಲಯ ಮೂರೂರಿನ ಧನ್ವ ಭಟ್, ಜನತಾ ವಿದ್ಯಾಲಯ ಮಿರ್ಜಾನಿನ ಪ್ರಸಾದ ಜಿ. ನಾಯ್ಕ, ಗಿಬ್ ಹೈಸ್ಕೂಲಿನ ವಿಮರ್ಷಾ ಯು. ಆಚಾರಿ, ನಿರ್ಮಲಾ ಪ್ರೌಢಶಾಲೆಯ ಪ್ರಣವ್ ಎಸ್., ಶ್ರದ್ಧಾ ಎಸ್.ಎನ್., ರಾಮನಾಥ ಊರಕೇರಿಯ ಪ್ರಜ್ಞಾ ವಿ. ನಾಯ್ಕ, ಸರಕಾರಿ ಪ್ರೌಢಶಾಲೆ ನೆಲ್ಲಿಕೇರಿಯ ಆನಮ್ ಕೆ.ಖಾಜಿ, ಅನನ್ಯಾ ಹಳದೀಪುರ, ಗಿಬ್ ಆಂಗ್ಲ ಮಾಧ್ಯಮದ ರಶ್ಮಿತಾ ಸಿ. ನಾಯ್ಕ, ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಕ್ತಾ, ನಿವೇದಿತಾ ಹಾಗೂ ರಕ್ಷಿತಾ ಪಟಗಾರ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಶಿಕ್ಷಕರಾದ ವಿಜಯಕುಮಾರ ನಾಯ್ಕ, ಪ್ರದೀಪ ನಾಯ್ಕ ಹಾಗೂ ಜಂಗಾ ಗೌಡ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES  ನಾಳೆ ಅಂಕೋಲಾದಲ್ಲಿ ಅಪರೂಪದ ಕೊಂಕಣಿ ನಾಟಕ "ಗಾಂಟಿ" ಪ್ರದರ್ಶನ.