ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ಶಿಕ್ಷಕ ಚಿದಾನಂದ ಭಂಡಾರಿಯವರು ನೀಡಿದ ಕಾರ್ಯಯೋಜನೆಯಲ್ಲಿ ಕ್ರಿಯಾತ್ಮಕ ಹಾಗೂ ಸವಿವರವಾಗಿ ತಮ್ಮೂರಿನ ಬಗ್ಗೆ ವಿವರ ನೀಡಿದ ಚಂದನ್ ಗಣೇಶ ಹೆಗಡೆಯ ಕಾರ್ಯಯೋಜನೆ ಇಲ್ಲಿದೆ.
ಎಲ್ಲೆಂದರಲ್ಲಿ ಓಡಾಡುವ ನವಿಲುಗಳು. ಮಳೆಗಾಲ, ಮೋಡದ ಘರ್ಜನೆ ಬಂತೆಂದರೆ ಸಾಕು ಗರಿಬಿಚ್ಚಿ ನರ್ತನ. ಬೆಳಗ್ಗಿನಿಂದ ಸಾಯಂಕಾಲದವರೆಗೂ ನಾಲ್ಕೂ ದಿಕ್ಕಿನ ಗುಡ್ಡಗಳಲ್ಲಿ ಪ್ರತಿಧ್ವನಿಸುತ್ತಿರುವ ನವಿಲಿನ ‘ಕೇಕಾರವ’. ಈ ಕಾರಣಕ್ಕಾಗಿಯೇ ನಮ್ಮ ಊರಿಗೆ ಹೆಸರು ಬಂತು ‘ಕೆಕ್ಕಾರು’ ಎಂದು. ನಮ್ಮೂರು ಸುಮಾರು 90 ವರ್ಷಗಳ ಹಿಂದೆ ದೊಡ್ಡ ಕಾಡಿನಿಂದ ಆವರಿಸಿತ್ತು. ಇಲ್ಲಿ ನಾಟಿ ವೈದ್ಯರುಗಳು ಕೋವಿ ಹಿಡಿದು ಮರಗಳ ಮೇಲೆ ಅಟ್ಟಕಟ್ಟಿ ತುಪ್ಪಳಕ್ಕಾಗಿ ಹುಲಿಗಳನ್ನು ಬೆಟೆಯಾಡುತ್ತಿದ್ದರಂತೆ. ಗ್ರಹಣದ ಸಮಯದಲ್ಲಿ ಔಷಧಿ ಬೇರುಗಳನ್ನು ಸಂಗ್ರಹಿಸಲು ಬಹಳ ಜನ ಬರುತ್ತಿದ್ದರೆಂದೂ ತಿಳಿದುಬರುತ್ತದೆ.
ಹೊದಿಕೆ-ಶಿರೂರಿನ ಅರಣ್ಯದಲ್ಲೆಲ್ಲೋ ಉದ್ಭವಿಸಿ, ಅಗ್ರಹಾರದ ಬಡಗಣಿ ಬಳಿ ಅರಬ್ಬೀ ಸಮುದ್ರ ಸೇರುವ ‘ಚಂದ್ರಪ್ರಭಾ ನದಿ’ (ಬಡಗಣಿ ಹೊಳೆ) ನಮ್ಮ ಊರಿನ ಮೂಲಕವೇ ಹರಿದು ಹೋಗುತ್ತದೆ. ಈ ಹೊಳೆ ಮಠದಿಂದ ಸ್ವಲ್ಪ ದೂರ ‘ಗುಬ್ಬಿಮನೆ’ಯ ತೋಟದ ಬಳಿ ಸುಮಾರಿಗೆ ಆಂಗ್ಲ ಭಾಷೆಯ ‘U’ ಅಕ್ಷರವನ್ನು ಹೋಲುವಂತೆ ತಿರುಗಿ, ಬೇಸಿಗೆಯಲ್ಲೂ ನಿರಾವರಿಗೆ ಅನುಕೂಲ ಮಾಡಿಕೊಡುವ ‘ಮೊಸಳೆಗುಂಡಿ’ ಎಂಬೊಂದು ಆಳವಾದ ಸುಳಿಗುಂಡಿಯನ್ನು ನಿರ್ಮಿಸಿದೆ. ಆದರೆ ಭೂಸವಕಳಿ ಮತ್ತಿತರ ಕಾರಣಗಳಿಂದ ಆ ಬೃಹತ್ ಸುಳಿಗುಂಡಿಯು ಈಗ ಕ್ಷೀಣಿಸುತ್ತಿದೆ.
ನಮ್ಮ ಊರಿನ ಪೂರ್ವ ದಿಕ್ಕಿನಲ್ಲಿ ಶ್ರೀದುರ್ಗಾ ಶಾಂತಿಕಾ ಪರಮೇಶ್ವರೀ ಅಮ್ಮನವರ ದೇವಸ್ಥಾನವಿದೆ. ಇದು ಬಹಳ ಪುರಾತನವಾದ ದೇವಾಲಯ. ಇಲ್ಲಿಗೆ ಹಲವಾರು ಭಕ್ತರು ನಡೆದುಕೊಳ್ಳುತ್ತಾರೆ. ದೇವಾಲಯದ ಹೊರಪ್ರಾಂಗಣದಲ್ಲಿ ಆರರಿಂದ ಏಳು ಅಡಿ ಎತ್ತರದ ಸುಮಾರು ಒಂದು ಅಡಿ ಅಗಲದ ಒಂದು ಸ್ತಂಭಶಾಸನವಿದೆ. ಅದರ ಅಧ್ಯಯನವೂ ನಡೆಯುತ್ತಿದೆ.
ಊರಿಗೆ ಬರುವ ಮುಖ್ಯ ರಸ್ತೆಯಲ್ಲಿ ಹಾಗೇ ಮುಂದುವರಿದರೆ 1.5 ಕಿ.ಮೀ. ಸಾಗುವುದರೊಳಗೆ ರಸ್ತೆಯ ಪಕ್ಕದಲ್ಲಿ ಇಳಿಜಾರು ಬಂಡೆಯ ಮೇಲೆ ಮೂಡಿಬಂದ ವಿನಾಯಕನಿದ್ದಾನೆ. ಅವನು ನೆಲೆಸಿದ ಸ್ಥಳದ ಪಕ್ಕದಲ್ಲೇ ರಸ್ತೆಯು ಇರುವುದರಿಂದ ಅವನನ್ನು ‘ಬಟ್ಟೇ ವಿನಾಯಕ’ ಅಂದರೆ ‘ದಾರಿ ಗಣಪ’ ಎಂದೇ ಕರೆಯುವರು.
ಇಲ್ಲಿಂದ ಅರ್ಧ ಕಿ.ಮೀ. ಸಾಗುವುದರೊಳಗೆ ಶಂಕರಾಚಾರ್ಯರಿಂದ ಕೊಡಲ್ಪಟ್ಟ ತಪೋರಾಮನ ಮೂರ್ತಿಯಿರುವ, ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಬಹಳ ಶಕ್ತಿಯುತವಾದ ‘ಶ್ರೀ ರಘೂತ್ತಮ ಮಠ’ವಿದೆ. ಇದರ ಪ್ರಾಕಾರದಲ್ಲಿ ‘ಹನುಮಗುಡಿ’, ‘ಶ್ರೀ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನ’ ಮತ್ತು ‘ಗುರುಮೂರ್ತಿ’ಗಳಿವೆ. ಈ ಮಠದಲ್ಲಿ ಬಹಳ ತಪಸ್ವಿಗಳು ಆಗಿಹೋಗಿದ್ದು ಈ ಜಾಗ ವಿಶೇಷ ಕಂಪನದಿಂದ ಆಧ್ಯಾತ್ಮಿಕ ಅನುಭೂತಿಯನ್ನು ಪ್ರೇರೇಪಿಸುತ್ತದೆ.
ಇಲ್ಲಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಅರ್ಚರ ಭಕ್ತಿಗೆ ಮೆಚ್ಚಿ; ಅವರು ಮುಪ್ಪಿನ ವಯಸ್ಸಿನಲ್ಲಿ ಗುಡ್ಡ ಹತ್ತಲು ಸಶಕ್ತರಲ್ಲದಿದ್ದಾಗ ಗುಡ್ಡವನ್ನೇ ಸೀಳಿ ದಾರಿಮಾಡಿಕೊಂಡು ಕೆಳಭಾಗಕ್ಕೆ ಬಂದು ನೆಲೆಸಿದ ‘ಸ್ವಯಂಭೇಶ್ವರ’ನಿದ್ದಾನೆ. ಇಲ್ಲಿ ಹರಕೆ ಹೇಳಿಕೊಂಡರೆ ಎಲ್ಲ ಕಷ್ಟಗಳೂ ದೂರವಾಗುತ್ತದೆ. ಇವರೆಲ್ಲ ತಮ್ಮ ಭಕ್ತರನ್ನು ಬಲು ಪ್ರೀತಿಯಿಂದ ರಕ್ಷಿಸುತ್ತಾರೆ.
ಮಠದ ಎದುರಿಗೆ 200 ಮೀ. ದೂರದಲ್ಲಿ ಶತಮಾನ ಪೂರೈಸಿರುವ; ಅಸಂಖ್ಯ ವಿಧ್ವಾಂಸರನ್ನು ಸೃಜಿಸಿರುವ ಒಂದು ಸಂಸ್ಕøತ ಪಾಠಶಲೆಯಿದೆ. ಇದರ ಸ್ಥಾಪಕರು ‘ವೇದಬ್ರಹ್ಮ ಶಿವ ಭಟ್ಟರು’. ಇವರು ಮೇಧಾವಿಗಳೂ, ಮಹಾನ್ ವಿಧ್ವಾಂಸರೂ, ದೇವರ ಸಾಕ್ಷಾತ್ಕಾರ ಹೊಂದಿದವರೂ, ದೈವೀ ಪುರುಷರೂ ಆಗಿದ್ದರೆಂದು ಹೇಳುತ್ತಾರೆ. ಇಲ್ಲಿ ‘ಸಂಸ್ಕøತ-ವೇದಗಳನ್ನು ಕಲಿಸುತ್ತಾರೆ. ಸಂಗೀತವನ್ನೂ ಕಲಿಸುತ್ತಾರೆ. ಶಿವ ಭಟ್ಟರು ನಮ್ಮೂರಿನ ಆಧ್ಯಾತ್ಮಿಕತೆ-ಪಾಂಡಿತ್ಯದ ಪ್ರತೀಕವಾದರೆ; ಅವರಿಂದ ಸ್ಥಾಪಿಸಲ್ಪಟ್ಟ ಪಾಠಶಾಲೆ ನಮ್ಮೂರು ಭಾರತೀಯ ವಿದ್ಯೆಯ ಪ್ರಸರಣೆಗೆ ಕೊಟ್ಟ ಮಹತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈ ಪಾಠಶಾಲೆಯ ಪಕ್ಕದ ಗುಡ್ಡದ ಮೇಲೆ ದೊಡ್ಡ ದೊಡ್ಡ ಬಂಡೆಗಳಿವೆ. ಇಲ್ಲಿ ಒಂದು ವೃತ್ತಾಕಾರದ ಬಂಡೆಯ ಮೇಲೆ ಐದು ಕುರ್ಚಿಗಳನ್ನು ಕೆತ್ತಿದ್ದಾರೆ. ಅಲ್ಲಿಯೇ ಸುತ್ತ ಮುತ್ತಲಿನ ಚಿಕ್ಕ ಬಂಡೆಗಳ ಮೇಲೆ ಲೋಟ ಬಟ್ಟಲುಗಳನ್ನಿಡಲು ಅನುಕೂಲವಾಗುವಂತಹ ರಚನೆಗಳಿವೆ. ಇವುಗಳನ್ನು ಮಿರ್ಜಾನಿನಡಿಯಲ್ಲಿದ್ದ ಸಾಮಂತರಿಗಾಗಿ ಕೆತ್ತಿದ್ದೆಂದು ಹೆಳುತ್ತಾರೆ.
ರಾಜ ಮಹಾರಾಜರ ಕಾಲದಲ್ಲಿ ನಮ್ಮೂರಲ್ಲಿರುವ ಎರಡು ಪ್ರಮುಖ ಸ್ಥಳಗಳು ಯುದ್ಧದ ವಿಚಾರಕ್ಕೆ ಪ್ರಸಿದ್ಧವಾಗಿವೆ. ಒಂದು ಇಲ್ಲಿಯ ಅಮ್ಮನವರ ದೇವಸ್ಥಾನದ ಬಳಿಯಿರುವ ‘ಸಾಂಬಾರ್ ಬೋಳೆ’ ಅಂದರೆ ‘ಸಮರ ಗುಡ್ಡ. ಇದು ಯುದ್ಧ ನಡೆವ ಸಂದರ್ಭದಲ್ಲಿ ಸೈನಿಕರು ಬಿಡಾರ ಹೂಡುವ ಸ್ಥಳವಾಗಿತ್ತು ಎಂದು ತಿಳಿದುಬರುತ್ತದೆ. ಅಲ್ಲದೆ ಇದೊಂದು ಎತ್ತರದ ಗುಡ್ಡವಾದ್ದರಿಂದ ವೀಕ್ಷಣಾ ಸ್ಥಳವೂ ಆಗಿತ್ತು. ಈ ಗುಡ್ಡದ ಮೇಲೆ ಎರಡು-ಮೂರು ದೊಡ್ಡ ದೊಡ್ಡ ರುಬ್ಬುವ ಕಲ್ಲುಗಳಿವೆ. ಒಂದು ಬಾವಿ ಸಹ ಇದೆ. ಇನ್ನೊಂದು ‘ಜಗಳ ಕಟ್ಟೆ’. ಅದಕ್ಕೆ ಈಗ ‘ಜಕ್ಕಳ ಕಟ್ಟೆ’ ಎಂದು ಕರೆಯುತ್ತಾರೆ. ಇದು ಬಟ್ಟೆ ವಿನಾಯಕ ದೇವಸ್ಥಾನದ ಪಕ್ಕದ ಕಲ್ಯಾಣಮಂಟಪದ ಎದುರಿನ ರಸ್ತೆಯಲ್ಲಿ ಕಡತೋಕಾಗೆ ಸಾಗುವಾಗ ಸಿಗುತ್ತದೆ. ಇಲ್ಲಿ ಒಂದು ಅಶ್ವತ್ಥಮರವಿರುವ ಎತ್ತರದ ಕಟ್ಟೆಯಿದೆ. ಇದರ ಬಳಿ ಸಿಗುವ ‘ಚೌಕಾ’ಕಾರದ ವಿಶೇಷ ಕಲ್ಲುಗಳನ್ನು ‘ಬಂದೂಕುಗಳಿಗೆ ಗುಂಡುಗಳಾಗಿ’ ಬಳಸುತ್ತಿದ್ದರೆಂದು ತಿಳಿದುಬರುತ್ತದೆ.
ನಮ್ಮ ಊರು ಕೇವಲ ವಿಶೇಷ ಸ್ಥಳಗಳಿಗಷ್ಟೇ ಅಲ್ಲ ಕಲಾವಿದರಿಗೂ ಪ್ರಸಿದ್ಧ. ಒಬ್ಬರು ‘ರಾಜ್ಯೋತ್ಸವ ಪ್ರಶಸ್ತಿ’ ವಿಜೇತ ಮೂರ್ತಿ ರಚನಾಕಾರ, ರಂಗನಿರ್ದೇಶಕ, ಕವಿ, ಚಿತ್ರಕಲಾಕಾರ ಹೀಗೆ ಬಹುಮುಖ ಪ್ರತಿಭೆಯ ಜಿ. ಡಿ ಭಟ್ಟರು. ಇವರು ನಮ್ಮ ಊರಿನಲ್ಲಿ ಮೆತ್ತುವ ಮಣ್ಣಿನ ಗಣಪತಿ ಬಹಳ ಪ್ರಸಿದ್ಧ. ಇದು ನಮ್ಮ ಜಿಲ್ಲೆಯ ಹಲವು ಭಾಗಗಳ ಹೊರತಾಗಿ ಹೊರಜಿಲ್ಲೆಗಳಾದ ದಾವಣಗೆರೆ, ಬೆಳಗಾವಿ, ರಾಯಚೂರು ಮತ್ತು ಚಿತ್ರದುರ್ಗಗಳಿಗೂ ಹೋಗುತ್ತದೆ. ಇನ್ನೊಬ್ಬರು ನಾಡಿನಲ್ಲಷ್ಟೇ ಅಲ್ಲದೆ ಹೊರನಾಡುಗಳಲ್ಲಿಯೂ ಖ್ಯಾತಿಗಳಿಸಿದ ರೇಡಿಯೊ ಕಲಾವಿದರು ಶ್ರೀಪಾದ ಭಟ್ಟರು. ಇವರು ರಾಮಕಥೆಯಲ್ಲಿ ಹಿನ್ನೆಲೆಗಾಯಕರಾಗಿ ಭಾಗವಹಿಸಿದವರು. ಇವರ ಭಾಗವತಿಗೆ ರೇಡಿಯೋದಲ್ಲಿ ಪ್ರಸಾರವಾಗುತ್ತಿತ್ತು. ಇವರು ನಾಡಿನಾದ್ಯಂತ ಗೀತರಾಮಾಯಣ, ಭಾಗವತಿಗೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ದೆಹಲಿ, ಮಹಾರಾಷ್ರದಲ್ಲಿ ಕೆಲವುಕಡೆ ಹೀಗೆ ರಾಜ್ಯದ ಹೊರಗೂ ಅನೇಕ ಕಡೆಗಳಲ್ಲಿ ಭಾಗವತಿಗೆ, ಗೀತರಾಮಾಯಣಗಳನ್ನು ಮಾಡಿದ್ದಾರೆ. ಇಂತಹ ಮಹಾಕಲಾಕಾರರೀರ್ವರೂ ನಮ್ಮ ಊರಿನವರು ಎಂದು ಹೇಳುವಾಗ ಮನಸ್ಸು ಹೆಮ್ಮೆಯಿಂದ ಬೀಗುತ್ತದೆ.
ನಮ್ಮ ಊರನ್ನು ಶಾಲೆಗಳ ಆಧಾರದ ಮೇಲೆ ಕೆಕ್ಕಾರು ‘ನಂಬರ್ 1’ ಮತ್ತು ‘ನಂಬರ್ 2’ ಎಂದು ಕರೆಯುತ್ತಾರೆ. ಎಷ್ಟೋ ಊರಿನಲ್ಲಿ ಶಾಲೆಯೇ ಇಲ್ಲದೇ ಮಕ್ಕಳು ಬೇರೆ ಊರಿಗೆ ಹೋಗುತ್ತಾರೆ. ಆದರೆ ನಮ್ಮ ಊರಿನಲ್ಲಿ ಬಹಳ ಹಿಂದಿನಿಂದಲೂ ಎರಡು ಶಾಲೆಗಳಿವೆ. ಈ ಸಂಗತಿಯಿಂದ ಮತ್ತು ಪಾಠಶಾಲೆಯಿಂದ ನಮ್ಮ ಊರಿನವರು ಭಾರತೀಯ ಮತ್ತು ಆಧುನಿಕ ಶಿಕ್ಷಣಗಳೆರಡಕ್ಕೂ ಎಷ್ಟು ಒತ್ತು ನೀಡಿದ್ದರೆಂದು ತಿಳಿಯುತ್ತದೆ.
ನಮ್ಮ ಊರಿನಲ್ಲಿ ಭತ್ತ, ಕಬ್ಬುಗಳನ್ನು ಬೆಳೆಯುವ ಗದ್ದೆಗಳಿವೆ. ಆರೋಗ್ಯಕ್ಕಾಗಿ ಪ್ರಾಥಮಿಕ ಆಸ್ಪತ್ರೆ, ಪ್ರಾಣಿಗಳ ಆರೋಗ್ಯಕ್ಕಾಗಿ ಪಶು ಆಸ್ಪತರೆ ಸಹ ಇದೆ. ಆಧುನಿಕತೆಗೆಬೇಕಾದ ಗಿರಣಿ, ಗಾಡಿ ರಿಪೇರಿ ಕೇಂದ್ರ; ನೈಸರ್ಗಿಕ ಸಂಪತ್ತುಗಳಾದ ಹೊಳೆ ಕಾಡುಗಳು; ಸಂಪರ್ಕಕ್ಕನುಕೂಲವಾಗುವಂತೆ ಅಂಚೆ ಮತ್ತು ಟೆಲಿಫೋನ್ ಕಛೇರಿ; ದಿನಸಿಗೆ ಕಿರಾಣಿ ಅಂಗಡಿಗಳಿದ್ದು ನಮ್ಮ ಊರು ಸುಮಾರಿಗೆ ಎಲ್ಲ ಸೌಕರ್ಯಗಳನ್ನು ಹೊಂದಿರುವ ಒಂದು ಸಮೃದ್ಧ ಹಳ್ಳಿಯಾಗಿದೆ.ನನಗೆ ನಮ್ಮ ಊರೆಂದರೆ ಬಹಳ ಹೆಮ್ಮೆಯ ಮತ್ತು ನಾನು ಚಿಕ್ಕಂದಿನಿಂದಲೂ ಇಲ್ಲಿಯೇ ವಾಸಿಸುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ.
ಚಂದನ್ ಹೆಗಡೆ. 8 ಬಿ ವಿಭಾಗ. ಸಿ.ವಿ.ಎಸ್.ಕೆ ಹೈಸ್ಕೂಲ್, ಕುಮಟಾ.