ಭಟ್ಕಳ: ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಬಾಚಿಕೊಳ್ಳುವುದಷ್ಟನ್ನೇ ಮುಖ್ಯವಾಗಿಸಿಕೊಳ್ಳದೇ ತಮ್ಮೋಳಗಿನ ಸೃಜನಶೀಲತೆಯನ್ನು ಕಾಪಾಡಿಕೊಂಡು ಕವಿ ಮನಸ್ಸನ್ನು ಜಾಗ್ರತವಾಗಿಟ್ಟುಕೊಳ್ಳಿ. ಯಾಕೆಂದರೆ ಕವಿಯಾದವ ಕ್ರೂರಿ ಆಗಲಾರ. ಅದಕ್ಕಾಗಿ ಬದುಕಿನಲ್ಲಿ ಯಾವುದೇ ಎತ್ತರದ ಸ್ಥಾನಕ್ಕೇರಿದರೂ ಕವಿಯಾಗುವತ್ತ ನಿಮ್ಮ ಮನಸ್ಸು ಪಕ್ವಗೊಳ್ಳಲಿ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಹೇಳಿದರು.
ಅವರು ಶನಿವಾರ ತಾಲೂಕಿನ ಶಿರಾಲಿಯ ಜನತಾ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಯಾವುದೇ ಉನ್ನತ ಅಧಿಕಾರದಲ್ಲಿದ್ದರೂ ಕೈ ಮತ್ತು ಬಾಯಿ ಶುದ್ಧವಾಗಿಲ್ಲದವ ಆ ಸ್ಥಾನಕ್ಕೆ ಅರ್ಹ ಆಗಲಾರ. ಮಕ್ಕಳು ತಮ್ಮ ಬದುಕು ರೂಪಿಸಿಕೊಳ್ಳುವಾಗ ಈ ಬದ್ದತೆಯನ್ನು ಇಟ್ಟುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಪ್ರತಿಭಾ ಪುರಸ್ಕಾರ ಪಡೆದ ಪ್ರತಿಭಾವಂತರು ಮುಂದೆ ಉತ್ತಮ ಸ್ಥಾನಮಾನ ಹೊಂದಿ ತಮ್ಮ ತಂದೆ ತಾಯಿಯನ್ನು ವೃದ್ಧಾಶ್ರಮದಲ್ಲಿ ಇಟ್ಟರೆ ಆ ಪ್ರತಿಭೆ ತುಕ್ಕು ಹಿಡಿದ ಕಬ್ಬಿಣಕ್ಕೆ ಸಮ. ಅದಕ್ಕಾಗಿ ಹೆತ್ತವರನ್ನು ಅವರ ಇಳಿ ವಯಸ್ಸಿನಲ್ಲಿ ತುಂಬ ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳಿ ಎಂದು ಅರವಿಮದ ಕರ್ಕಿಕೋಡಿ ಅವರು ನುಡಿದರು.
ಆನತಾ ವಿದ್ಯಾಲಯದ ಸಂಸ್ಥಾಪಕ ದಿನಕರ ದೇಸಾಯಿ ಅವರು ಶಿಕ್ಷಣ ಚಳುವಳಿ ಆರಂಭಿಸಿದರು. ಅವರ ಚಳುವಳಿಯನ್ನು ಈಗಿನ ಹಿರಿಯರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮುಂದೆ ಇಲ್ಲಿಯ ವಿದ್ಯಾರ್ಥಿಗಳು ಮುನ್ನಡೆಸಿಕೊಂಡು ಹೋಗಬೇಕು. ಇದು ಒಂದು ರೀತಿಯಲ್ಲಿ ರಿಲೇ ಆಟ ಇದ್ದ ಹಾಗೆ. ಶಿಕ್ಷಣ ಚಳುವಳಿಯನ್ನೂ ಕೂಡ ಮುಂದುವರೆಸಿಕೊಂಡು ಹೋಗುವುದು ದೇಶ ಸೇವೆಯ ಒಂದು ಬಾಗ. ಕೆನರಾ ವೆಲ್‍ಫೆರ್ ಟ್ರಸ್ಟ್ ಕೂಡ ಪಾರದರ್ಶಕವಾಗಿ ಮುನ್ನಡೆಯುತ್ತಿರುವುದು ಅಭಿಮಾನದ ಸಂಗತಿ ಎಂದು ಕರ್ಕಿಕೋಡಿ ತಿಳಿಸಿದರು.
ಉದ್ಯಮಿ ಹಾಗೂ ದಾನಿ ಶುಭೋದ ಶಾನಭಾಗ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಬದುಕನ್ನು ಗಂಧದ ಕೊರಡಿನಂತೆ ಸವೆಯಬೇಕು. ಅಂದಾಗ ಮಾತ್ರ ಮನುಷ್ಯ ಬದುಕು ಸಾರ್ಥಕ ಎಂದರು.
ಮುಖ್ಯ ಅತಿಥಿಯಾಗಿ ಉದ್ಯಮಿ ಅಶೋಕ ಕಾಮತ್, ಶಿವಾನಂದ ಕಾಮತ್, ಡಿ.ಜೆ.ಕಾಮತ್ ಪಾಲ್ಗೊಂಡು ಮಾತನಾಡಿದರು. ಶಾಲಾಭಿವೃದ್ದದಿ ಸಮಿತಿ ಅಧ್ಯಕ್ಷ ವಿಷ್ಣು ಎಸ್. ಶಾನಬಾಗ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರೌಢಶಾಲಾ ವಿಭಾಗದ ಪ್ರಭಾವ ಮುಖ್ಯೋಪಾದ್ಯಾಯ ಎಂ.ಎ. ನಾಯ್ಕ ಪ್ರಭಾರ ಮುಖ್ಯೋಧ್ಯಾಪಕ, ಬಾಲಮಂದಿರ ಮುಖ್ಯೋಪಾದ್ದಯಿನಿ ಸ್ಮೀತಾ ರಾಮರಥ, ದಾನಿಗಳಾದ ಸುರೇಂದ್ರ ಶಾನಭಾಗ, ರಾಮಕೃಷ್ಣ ಪ್ರಭು, ಎಂ.ಡಿ.ಪಕ್ಕಿ ಮುಂತಾದವರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಅಮೃತ್ ರಾಮರಥ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಟಿ.ಬಿ.ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. ಎಚ್. ಎಸ್. ಗುನಗ ಸನ್ಮಾನ ಪತ್ರ ವಾಚಿಸಿದರು. ರಾಜೇಶ ಶೆಟ್ಟಿ ಪ್ರತಿಭಾಪುರಸ್ಕರ ಪಡೆದ ವಿದ್ಯಾರ್ಥಿಗಳ ಯಾದಿ ಓದಿದರು. ಜಿ.ಎಂ. ಗಜನಿಕರ್ ವಂದಿಸಿದರು.