ಭಟ್ಕಳ-ಸಂಸ್ಕಾರಯುತ ಶಿಕ್ಷಣ ಬದುಕನ್ನು ಬೆಳಗಬಲ್ಲದು. ಎಷ್ಟೇ ಬುದ್ದಿವಂತರಾದರೂ ಸಂಸ್ಕಾರ ಮೈಗೂಡಿಸಿಕೊಳ್ಳದೆ ಹೋದಲ್ಲಿ ಸಕಾದಲ್ಲಿ ಕಲಿತ ವಿದ್ಯೆ ಕೈಹಿಡಿಯಲಾರದು ಎನ್ನುತ್ತಾ ಮಕ್ಕಳ ಸಾಹಿತ್ಯ ರಚನೆ ಗಂಭೀರ ಸವಾಲಿದ್ದಂತೆ. ಮಕ್ಕಳ ಸಾಹಿತ್ಯದಲ್ಲಿ ಪೂರ್ಣ ಪ್ರಮಾಣದ ಒಪ್ಪಿಗೆ ಅಥವಾ ಸಂಪೂರ್ಣ ತಿರಸ್ಕಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿಯೇ ಮಕ್ಕಳ ಸಾಹಿತ್ಯಕ್ಕೆ ವಿಮರ್ಶೆ ಎಂಬುದೇ ಇಲ್ಲ. ಮಕ್ಕಳ ಸಾಹಿತ್ಯ ಬಾಲ್ಯಕ್ಕೆ ಕರೆದೊಯ್ಯುವ ಕಾಲಯಂತ್ರಗಳು. ಹಿಮ್ಮುಖ ಯಾನ ಬದುಕಿನ ವಿಸ್ತಾರವನ್ನು ಅಳೆಯುವ ಅಳತೆಗೋಲಿದ್ದಂತೆ ಎಂದು ಉತ್ತರ ಕನ್ನಡ ಜಿಲ್ಲಾ ಕಸಾಪ ಕೋಶಾಧ್ಯಕ್ಷರು ಸಾಹಿತಿಗಳು ಆದ ಉಮೇಶ ಮುಂಡಳ್ಳಿ ಹೇಳಿದರು.
ಅವರು ಉತ್ತರ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಶನಿವಾರ ತಾಲೂಕಿನ ಚಿತ್ರಾಪುರ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಸಾಹಿತ್ಯ ರಚನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಿದ ಶ್ರೇಯಸ್ಸು ಜಿ.ಪಿ.ರಾಜರತ್ನಂ ಅವರಿಗೆ ಸಲ್ಲುತ್ತದೆ. ರಾಜರತ್ನಂ ಅವರ ‘ಬಣ್ಣದ ತಗಡಿನ ತುತ್ತೂರಿ’, ‘ನಾಯಿ ಮರಿ ನಾಯಿ ಮರಿ ತಿಂಡಿಬೇಕೆ’ ಸೇರಿದಂತೆ ನಾನಾ ಪದ್ಯಗಳನ್ನು ರಚನೆ ಮಾಡಿ ಮಕ್ಕಳ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು.
ರಾಜರತ್ನಂ ಕೇವಲ ಕನ್ನಡ ಭಾಷಾ ಸಂಸ್ಕೃತಿಗೆ ಕೊಡುಗೆ ನೀಡದೇ, ವಿಶ್ವ ಮಾನವ ಸಂಸ್ಕೃತಿಗೆ ಆದ್ಯತೆ ನೀಡಿದರು. ಇಂದಿಗೂ ಮಕ್ಕಳ ಸಾಹಿತ್ಯಕ್ಕೆ ರತ್ನತ್ರಯರಾದ ಮಂಜಪ್ಪ, ಹೊಯ್ಸಳ, ಗೋವಿಂದ ಪೈ ಸಾಲಿನಲ್ಲಿ ರಾಜರತ್ನಂ ಇರುವುದು ಕನ್ನಡ ಸಾಹಿತ್ಯಕ್ಕೆ ಹೆಮ್ಮೆಯ ಗರಿ.
ತೇಲು ಪದ್ಯಗಳ ಅಬ್ಬರದ ನಡುವೆ ಮಕ್ಕಳಿಗೆ ಇಂಪಾದ ಹಾಡು ಕೇಳಿಸಿ, ಮಕ್ಕಳ ಕನಸಿನ ಲೋಕದಲ್ಲಿ ಸ್ಥಾನ ಪಡೆದವರು ಎಚ್.ಎಸ್.ವಿ.
ಲೇಖಕರು ಅನುಭವಿಸುವ ಸಂಕಟ, ನೋವು, ಅವಮಾನಗಳ ಕರ್ಮ ಯಾರಿಗೂ ಬೇಡ. ಆದಾಗ್ಯೂ ಅದೆಲ್ಲವನ್ನು ಕುರಿತು ಧ್ಯಾನಿಸುವವ ಬುದ್ಧ ಅಥವಾ ಕವಿಯಾಗಿದ್ದಾನೆ. ಕಾವ್ಯ ಎಂಬುದು ಹೂವು ಅರಳಿದಂತೆ. ಹೂವು ಅರಳಲು ಅದರದ್ದೇ ಆದ ಸಮಯ ಬೇಕಾಗುತ್ತದೆ. ಯಾವ ಹೂವೂ ಕೂಡ ಧಿಡೀರ್ ಆಗಿ ನಿತ್ಯ ಮುಂಜಾನೆ ಅರಳುವುದಿಲ್ಲ. ಅದಕ್ಕೆ ಅದರದ್ದೇ ಆದ ಕಾಲಮಾನ ಬೇಕಾಗುತ್ತದೆ ಉಮೇಶ ಮುಂಡಳ್ಳಿ ನುಡಿದರು.
ವೇದಿಕೆಯ ಜಿಲ್ಲಾ ಸಂಚಾಲಕರು ಹಿರಿಯ ಸಾಹಿತಿಗಳು ಆದ ಸುಮುಖಾನಂದ ಜಲವಳ್ಳಿಯವರು ಮಾತನಾಡಿ ದ.ಕ. ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಪ್ರಭಾವ ಬೀರಿದ್ದ ಮಕ್ಕಳ ಸಾಹಿತ್ಯ ವೇದಿಕೆ ನಮ್ಮ ಜಿಲ್ಲೆಯಲ್ಲೂ ಸಹ ಮಕ್ಕಳಿಗೆ ಸಾಹಿತ್ಯ ಅಭಿರುಚಿ ಬೆಳೆಸುವ ಸದುದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಂಡಿದ್ದು ಅದರ ಪ್ರಯೋಜನ ಪಡೆದುಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮುಂದಿನ ದಿನದಲ್ಲಿ ಮಕ್ಕಳಿಗಾಗಿಯೇ ಜಿಲ್ಲಾ ಮಟ್ಟದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅವರು ತಿಳಿಸಿದರು.
ಶ್ರೀವಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮಮತಾ ಭಟ್ಕಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಸಂಚಾಲಕ ಚಂದ್ರಶೇಖರ ಪಡುವಣಿ ಪ್ರಸ್ತಾವಿಕ ಮಾತನಾಡಿದರು. ಶಿಕ್ಷಕಿ ಲೇಖಕಿ ರೇಷ್ಮಾ ಉಮೇಶ ಸ್ವಾಗತಿಸಿದರು.ಸಾಹಿತಿ ಎನ್ ಆರ್ ಹೆಗಡೆ, ಜಯಶ್ರೀ ಆಚಾರ್ಯ ಉಪಸ್ಥಿತರಿದ್ದರು. ಶಿಕ್ಷಕ ಶಿವಾನಂದ ಮೊಗೇರ ನಿರ್ವಹಿಸಿದರು. ಸಂಜೆಯವರೆಗೂ ನಡೆದ ಶಿಬಿರದಲ್ಲಿ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಜರಿದ್ದರು.