ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂರ್ವ ಕಾಲೇಜಿನ ಸಹಯೋಗದಲ್ಲಿ ಭಟ್ಕಳ ತಾಲೂಕಿನ ಹೈಸ್ಕೂಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಪ್ರಾರ್ಥನಾ ಪ್ರತಿಷ್ಠಾನದ ಸದಸ್ಯ ಹಾಗೂ ಮಾಜಿ ಪುರಸಭಾ ಸದಸ್ಯ ವೆಂಕಟೇಶ ನಾಯ್ಕ ಆಸರಕೇರಿ ಉದ್ಘಾಟಿಸಿ ಪ್ರಾರ್ಥನಾ ಪ್ರತಿಷ್ಠಾನವು ಇಂಥ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ನಾಡು ನುಡಿಯ ಕುರಿತು ಅರಿವು ಮೂಡಿಸುವುದರ ಜೊತೆಗೆ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರಲ್ಲದೇ ವಿದ್ಯಾರ್ಥಿಗಳು ಇಂಥ ಸ್ಪರ್ದಾ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂಧು ನುಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಉ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ ಮಾತನಾಡಿ ರಸಪ್ರಶ್ನೆ ಸ್ಪರ್ಧೆ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ಸ್ಪರ್ಧಾತ್ಮಕ ಭಾವನೆ ಮೂಡಲು ಸಹಕಾರಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಕಾರ್ಯಕ್ರಮ ಸಂಘಟಿಸಿ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಕಾರ್ಯಕ್ರಮ ಸಂಘಟಿಸುತ್ತಿರುವುದು ಸಂತಸದ ವಿಷಯ. ಪ್ರಾರ್ಥನಾ ಪ್ರತಿಷ್ಠಾನದ ಮೂಲಕ ಮತ್ತಷ್ಟು ವಿನೂತನ ಕಾರ್ಯಕ್ರಮಗಳು ಸಂಘಟನೆಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ತೆರೇಸಾ ಸೆರಾ ವಹಿಸಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ಆನಂದಾಶ್ರಮ ಕಾಲೇಜಿನ ಉಪಪ್ರಾಂಶು ಪಾಲೆ ಸಿಸ್ಟರ ಟ್ರೆಸಿಲ್ಲಾ ಡೆಮೆಲ್ಲೊ, ಆನಂದಾಶ್ರಮ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕಿ ಸಿಸ್ಟರ್ ಸರಿತಾ ಥೋರಸ್, ಅಳ್ವೆಕೋಡಿ ದುರ್ಗಾಪರಮೇಶ್ವರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಕೆ.ಬಿ.ಮಡಿವಾಳ ಉಪಸ್ಥಿತರಿದ್ದರು.
ನಂತರ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶ್ರೀವಲಿ ಪ್ರೌಢಶಾಲೆ ಚಿತ್ರಾಪುರ, ದ್ವಿತೀಯ ಬಹುಮಾನವನ್ನು ವಿದ್ಯಾಭಾರತಿ ಪ್ರೌಢಶಾಲೆ ಮತ್ತು ಆನಂದಾಶ್ರಮ ಪ್ರೌಢಶಾಲೆ ಹಾಗೂ ತ್ರತೀಯ ಬಹುಮಾನವನ್ನು ಸರ್ಕಾರಿ ಪ್ರೌಢಶಾಲೆ ತೆರ್ನಮಕ್ಕಿ ಪಡೆದುಕೊಂಡಿತು. ಸ್ಪರ್ದೆಯಲ್ಲಿ ದಿ ನ್ಯೂ ಇಂಗ್ಲೀಷ್ ಸ್ಕೂಲ್ ಭಟ್ಕಳ, ಸಿದ್ಧಾರ್ಥ ಪ್ರೌಢಶಾಲೆ ಶಿರಾಲಿ, ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಭಟ್ಕಳ, ಜನತಾ ವಿದ್ಯಾಲಯ ಮುರ್ಡೇಶ್ವರ, ದುರ್ಗಾಪರಮೇಶ್ವರಿ ಪ್ರೌಢಶಾಳೆ ಅಳ್ವೇಕೋಡಿ ಮುಂತಾದ ತಾಲೂಕಿನ ಒಂಭತ್ತು ಪ್ರೌಢಶಾಲೆಗಳು ಬಾಗವಹಿಸಿದ್ದವು. ರಸಪ್ರಶ್ನೆ ಕಾರ್ಯಕ್ರಮವನ್ನು ಆನಂದಾಶ್ರಮ ಪ್ರೌಢಶಾಲಾ ಶಿಕ್ಷಕ ಪೆಟ್ರಿಕ್ ಟೆಲ್ಲಿಸ್ ವ್ಯವಸ್ಥಿತವಾಗಿ ನಿರ್ವಹಿಸಿದರು. ಶಿಕ್ಷಕರಾದ ಕೆ.ಬಿ.ಮಡಿವಾಳ, ಪ್ರಿಯ ನಾಯ್ಕ, ಪಾರ್ವತಿ ಗೌಡ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಹಾಗೂ ವಿಜೇತರಾದ ವಿದ್ಯಾರ್ಥಗಳಿಗೆ ಪ್ರಾರ್ಥನಾ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ