ಕುಮಟಾ: ಹೊನ್ನಾವರ ತಾಲೂಕಿನ ಕರ್ಕಿಯ ಯಕ್ಷಗಾನ ಪರಂಪರೆಯ ಅಗ್ರಮಾನ್ಯ ಕಲಾವಿದ ಮತ್ತು ಜಿಲ್ಲೆಯ ಸಭಾಹಿತ ಮಟ್ಟಿನ ಸಮರ್ಥ ಪ್ರತಿನಿಧಿ ದಿ.ಪಿ.ವಿ. ಹಾಸ್ಯಗಾರ ಕರ್ಕಿ ಇವರ ನೆನಪಿನಲ್ಲಿ ನೀಡುವ 2019 ರ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಾಲಾ ಶಿಕ್ಷಕ ಎಚ್. ಶ್ರೀಧರ ಹಂದೆ ಅವರನ್ನು ಆಯ್ಕೆಮಾಡಲಾಗಿದೆ.
ಹೊನ್ನಾವರ ಕರ್ಕಿಯ ಹವ್ಯಕ ಸಭಾಭವನದಲ್ಲಿ ಡಿ. 29 ರಂದು ಮಧ್ಯಾಹ್ನ 4.00 ಗಂಟೆಗೆ ನಡೆಯಲಿರುವ ಪಿ. ವಿ. ಹಾಸ್ಯಗಾರರ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನಗಳು ನಡೆಯಲಿವೆ. ಪ್ರತಿವರ್ಷದಂತೆ ಯಕ್ಷಗಾನ ಸಂಶೋಧನಾ ಕೇಂದ್ರ, ಕುಮಟಾ, ಕಡತೋಕ ಕೃಷ್ಣ ಭಾಗವತ, ಪಿ. ವಿ. ಹಾಸ್ಯಗಾರ ಸಂಸ್ಮರಣ ವೇದಿಕೆ, ಹೆಬ್ಳೇಕೆರಿ (ಕಡತೋಕ), ಯಕ್ಷರಂಗ ಪತ್ರಿಕಾ ಬಳಗ ಹಳದೀಪುರ, ಸಿರಿಕಲಾ ಮೇಳ, ಬೆಂಗಳೂರು ಮತ್ತು ಪಿ. ವಿ. ಹಾಸ್ಯಗಾರ ಕುಟುಂಬದವರ ಸಹಕಾರದೊಂದಿಗೆ ನಡೆಯಲಿರುವ ಈ ಸಮಾರಂಭವನ್ನು ಪಿ ವಿ. ಹಾಸ್ಯಗಾರರ ಯಕ್ಷಶಿಷ್ಯ ಬಳಗದವರು ಈ ವರ್ಷವೂ ಹಮ್ಮಿಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆಯವರನ್ನು ಗೌರವಿಸಲಾಗುವುದು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಸತ್ಯಾನಂದ ಜೆ. ಕೈರಣ್ಣ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಭಾಕಾರ್ಯಕ್ರಮದ ನಂತರ ಹಂದೆ ಯಕ್ಷವೃಂದದಿಂದ ಐರೋಡಿ ಗೋವಿಂದಪ್ಪ, ಮೋಹನದಾಸ ಶೆಣೈ, ಕೆ. ಪಿ. ಹೆಗಡೆ, ಸುಜಯೀಂದ್ರ ಹಂದೆ, ಲಂಬೋದರ ಹೆಗಡೆ ಮುಂತಾದ ಹಿರಿಯ ಮತ್ತು ನುರಿತ ಕಲಾವಿದರ ಕೂಡುವಿಕೆಯಲ್ಲಿ ತಾಮ್ರಧ್ವಜ ಕಾಳಗ ಯಕ್ಷಗಾನ ಜರುಗಲಿದೆ ಎಂದು ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರವು ತಿಳಿಸಿದೆ.