ಕುಮಟಾ: ತಾಲೂಕಿನ ಹೆಗಡೆಯ ವೇದ ಸಂಸ್ಕೃತ ಅಕಾಡೆಮಿಯಿಂದ ಪ್ರಕಾಶಿಸಲ್ಪಡುವ ರಿಸರ್ಚ್ ಜರ್ನಲ್ ( ಸಂಶೋಧನಾ ಪತ್ರಿಕೆ) ಯ 12ನೇ ಸಂಪುಟವನ್ನು ಹಳದೀಪುರ ಶಾಂತಾಶ್ರಮ ಮಠದ ಪ.ಪೂ ಶ್ರೀ ಶ್ರೀ ವಾಮನಾಶ್ರಮ ಸ್ವಾಮೀಜಿಯವರು ಲೋಕಾರ್ಪಣೆಗೊಳಿಸಿದರು. ಹಳದೀಪುರದ ಕೆರೆಗದ್ದೆಯ ಶಾಂತಾಶ್ರಮ ಮಠದಲ್ಲಿ ಶ್ರೀ ಕರ ಗಳಿಂದ ಈ ರಿಸರ್ಚ್ ಜರ್ನಲ್ ಲೋಕಾರ್ಪಣೆ ಗೊಂಡಿತು.
ವೇದ ಸಂಸ್ಕೃತ ಅಕಾಡೆಮಿ ಸಮಾಜಕ್ಕೆ ತನ್ನದೇ ಕೊಡುಗೆ ನೀಡುತ್ತಿದ್ದು, ವೇದ ಶಾಸ್ತ್ರಗಳನ್ನು ಉಳಿಸುವ ಹಾಗೂ ಮುಂದಿನ ತಲೆಮಾರಿಗೆ ಅದನ್ನು ಕೊಂಡೊಯ್ಯುವ ದಿಶೆಯಲ್ಲಿ ಕಾರ್ಯಮಾಡುತ್ತಿರುವ ಬಗ್ಗೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ವೇದ ಸಂಸ್ಕೃತ ಅಕಾಡೆಮಿಯ ಸಂಸ್ಥಾಪಕರು ಹಾಗೂ ವಿದ್ವಾಂಸರು ಸಂಶೋಧನಾ ಕೃತಿಯ ಸಂಪಾದಕರೂ ಆದ ಡಾ. ಗೋಪಾಲಕೃಷ್ಣ ಹೆಗಡೆಯವರು ಮಾತನಾಡಿ ಹೆಗಡೆಯಂತಹ ಸಣ್ಣ ಪ್ರದೇಶದಲ್ಲಿ ವೇದದ ಉಳಿವಿಗೆ ಪ್ರಯತ್ನ ಸಲ್ಲುವಂತೆ ನನ್ನನ್ನು ಪ್ರೇರೇಪಿಸಿದ ಹಾಗೂ ನನ್ನಲ್ಲಿ ಆ ಸೇವೆ ಮಾಡಿಸುತ್ತಿರುವ ದೇವರಿಗೆ ನಾನು ಕೃತಜ್ಞತೆ ಸಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ವೇದ ಸಂಸ್ಕೃತ ಅಕಾಡೆಮಿಯ ಸದಸ್ಯರುಗಳಾದ ಡಾ.ಯು.ಜಿ ಶಾಸ್ತ್ರಿ, ಎಂ,ಎಸ್ ಹೆಗಡೆ,ವಿ.ಎಸ್ ಅವಧಾನಿ, ರಾಘವೇಂದ್ರ ಹೆಗಡೆ ಇನ್ನಿತರರು ಹಾಜರಿದ್ದರು.