ಕುಮಟಾ: ತಾಲೂಕಿನ ವಿವಿಧ ೩೮ ಫಲಾನುಭವಿಗಳಿಗೆ ಮಂಜೂರಾದ ೧೨ ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ ನ್ನು ಶಾಸಕ ದಿನಕರ ಶೆಟ್ಟಿ ಶನಿವಾರ ಪಟ್ಟಣದ ತಹಸೀಲ್ದಾರ ಕಚೇರಿಯ ಆವಾರದಲ್ಲಿ ವಿತರಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮೊತ್ತದ ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ ನ್ನು ವಿತರಿಸಲಾಗಿದೆ. ಒಟ್ಟೂ ೫೪ ಫಲಾನುಭವಿಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಇನ್ನೂ ೩೦ ರಿಂದ ೪೦ ಚೆಕ್ ವಿತರಿಸಬೇಕಾಗಿದ್ದು, ೧ ವಾರದೊಳಗಡೆ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದ ಅವರು, ಪ್ರಸಕ್ತ ಸಾಲಿನಲ್ಲಿ ಭೀಕರವಾಗಿ ಸುರಿದ ಮಳೆಯಿಂದ ಮೀನುಗಾರರ ಬಲೆ ಹಾಗೂ ದೋಣಿಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಅವುಗಳಿಗೂ ಪರಿಹಾರ ಧನವನ್ನು ರಾಜ್ಯದ ಬಿಜೆಪಿ ಸರ್ಕಾರ ಮಂಜೂರಿ ಮಾಡಿದೆ. ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಮೀನುಗಾರರ ಯಾದಿಯನ್ನು ಸಿದ್ಧಪಡಿಸಲು ಈಗಾಗಲೇ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದ್ದು, ಈ ಪರಿಹಾರ ಮೊತ್ತವನ್ನೂ ಒಂದು ವಾರದೊಳಗಡೆ ವಿತರಿಸುವ ಭರವಸೆಯಿದೆ ಎಂದರು.
ಕ್ಷೇತ್ರದಾದ್ಯಂತ ಮೂಲಭೂತ ವ್ಯವಸ್ಥೆಗೆ ಮೊದಲು ಆದ್ಯತೆ ನೀಡಲಾಗಿದೆ. ತಾಲೂಕಿನಲ್ಲಿ ಹದಗೆಟ್ಟಿರುವ ರಸ್ತೆಯ ಮರುದುರಸ್ಥಿ ಕಾರ್ಯ ಪ್ರಾರಂಭವಾಗಿದ್ದು, ರಸ್ತೆ ಅಭಿವೃದ್ಧಿ ಹಾಗೂ ಮರುದುರಸ್ಥಿಗೆ ಮಂಜೂರಾದ ಎಲ್ಲ ಕಾಮಗಾರಿಗೂ ಆದಷ್ಟು ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ. ಉಳಿದ ಅಭಿವೃದ್ಧಿ ಕಾರ್ಯವನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ ಎಂದರು.
ಉಪ ವಿಭಗಾಧಿಕಾರಿ ಎಂ.ಅಜಿತ್, ತಹಸೀಲ್ದಾರ ಮೇಘರಾಜ ನಾಯ್ಕ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ತಾ.ಪಂ ಸದಸ್ಯರಾದ ಗಜಾನನ ಪೈ, ಮಹೇಶ ಶೆಟ್ಟಿ, ಜಗನ್ನಾಥ ಶೆಟ್ಟಿ, ಪುರಸಭಾ ಸದಸ್ಯರಾದ ಸಂತೋಷ ನಾಯ್ಕ, ಮೋಹಿನಿ ಗೌಡ, ಶೈಲಾ ಗೌಡ, ಸೂರ್ಯಕಾಂತ ಗೌಡ, ಪಲ್ಲವಿ ಮಡಿವಾಳ, ಸಂತೇಗುಳಿ ಗ್ರಾ.ಪಂ ಅಧ್ಯಕ್ಷ ವಿನಾಯಕ ಭಟ್ಟ, ಬಾಡ ಗ್ರಾ.ಪಂ ಸದಸ್ಯ ಹರೀಶ ನಾಯ್ಕ, ಬಿಜೆಪಿ ಮಂಡಳಾಧ್ಯಕ್ಷ ಹೇಮಂತಕುಮಾರ ಗಾಂವಕರ, ಪಕ್ಷದ ಪ್ರಮುಖರಾದ ಎಂ.ಎಂ.ಹೆಗಡೆ ಕಡ್ಲೆ, ಕಿಶನ ವಾಳ್ಕೆ, ಚೆತೇಶ ಶಾನಭಾಗ, ದತ್ತಾತ್ರೇಯ ನಾಯ್ಕ, ಸುರೇಶ ಹರಿಕಂತ್ರ, ಮಧುಸೂದನ ಭಟ್ಟ, ಬಿ.ಡಿ.ಪಟಗಾರ, ಜಿ.ಐ.ಹೆಗಡೆ, ಮಹೇಶ ನಾಯ್ಕ ವನ್ನಳ್ಳಿ, ವಿರೂಪಾಕ್ಷ ನಾಯ್ಕ, ಅಶೋಕ ನಾಯ್ಕ, ದಾಮೋದರ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.