ಕುಮಟಾ: 2017-18ರ ನಗರೋತ್ಥಾನದ 3 ನೇ ಹಂತದ ಅಡಿಯಲ್ಲಿ ನಾನು ಶಾಸಕಳಾಗಿದ್ದಾಗ ತಂದಿದ್ದ ಸುಮಾರು 5 ಕೋಟಿ 40 ಲಕ್ಷ ರೂಗಳ ಅನುದಾನದಲ್ಲಿ ಪಟ್ಟಣದ ರಸ್ತೆಗಳ ಡಾಂಬರೀಕರಣ ಹಾಗೂ ಕಾಂಕ್ರೀಟಿಕರಣ ನಡೆದಿದೆ. ಆದರೆ ಇಂದಿನ ಶಾಸಕರು ಈ ಕೆಲಸಗಳನ್ನು ಮಾಡಿದ್ದಾರೆ ಎಂಬ ತಪ್ಪು ತಿಳುವಳಿಕೆ ನಮ್ಮ ಜನರಲ್ಲಿ ಇದೆ. ಆಗಬೇಕಾದ ಕಾಮಗಾರಿಗಳು ಸಾಕಷ್ಟು ಇದೆ. ಆ ಕಾಮಗಾರಿಗಳನ್ನು ಮಂಜೂರು ಮಾಡಿಸುವ ಕೆಲಸವನ್ನು ಶಾಸಕರು ಮಾಡಲಿ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಹೇಳಿದರು.
ಸೋಮವಾರ ಪಟ್ಣದ ರಥಬೀದಿಯ ನೂತನ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು,” ನಾನು ಶಾಸಕಳಾಗಿದ್ದ ಸಂಧರ್ಭದಲ್ಲಿ ನಮ್ಮ ವಿರೋಧ ಪಕ್ಷದವರು, ಶಾರದಾ ಶೆಟ್ಟಿ ಅವರು ಎಲ್ಲಾ ಕಡೆ ಹೊಂಡಗಳನ್ನು ಮಾಡಿದ್ದಾರೆ. ರಸ್ತೆ ದುರಸ್ಥಿ ಕೆಲಸ ಮಾಡುತ್ತಿಲ್ಲ ಎನ್ನುತ್ತಿದ್ದರು. ಆ ವಿಷಯವನ್ನು ನಾನು ಗಮನದಲ್ಲಿಟ್ಟುಕೊಂಡು 2017-18 ರ ನಗರೋತ್ಥಾನದ 3 ನೇ ಹಂತದ ಅಡಿಯಲ್ಲಿ ಸುಮಾರು 5 ಕೋಟಿ 40 ಲಕ್ಷ ರೂಗಳ ಅನುದಾನವನ್ನು ತಂದಿದ್ದೆ. ಆ ಅನುದಾನದ ಅಡಿಯಲ್ಲಿ ಪಟ್ಟಣದ ರಸ್ತೆಗಳ ಡಾಂಬರೀಕರಣ ಹಾಗೂ ಕಾಂಕ್ರೀಟಿಕರಣ ನಡೆದಿದೆ. ಅಂತೆಯೇ ತೀರಾ ಜನಬಳಕೆಯಲ್ಲಿದ್ದ ಈ ರಥ ಬೀದಿಯ ರಸ್ತೆಯ ಕಾಂಕ್ರೀಟಿಕರಣವನ್ನು 40 ಲಕ್ಷ ರೂ ವೆಚ್ಚದಲ್ಲಿ ಮಾಡಿ ಮುಗಿಸಲಾಗಿದೆ. ಅಂತೆಯೇ ಪಟ್ಟಣದ ಗಿಬ್ ಹೈಸ್ಕೂಲ್ ಸರ್ಕಲ್ ನಿಂದ ಜೈವಂತ ಸ್ಟುಡಿಯೋ ವರೆಗಿನ ರಸ್ತೆ ಡಾಂಬರೀಕರಣ ಹಾಗೂ ಗಟಾರ ನಿರ್ಮಾಣ ಜೈವಂತ ಸ್ಟುಡಿಯೊದಿಂದ ಹಳೆ ಮೀನು ಮಾರುಕಟ್ಟೆವರೆಗೆ ಕಾಂಕ್ರೀಟ್ ರಸ್ತೆ, ಅಂತೆಯೇ ಬಗ್ಗೋಣ ರಸ್ತೆಗೂ ಸಹ 60 ಲಕ್ಷ ರೂ ಅನುದಾನ ಬಿಡುಗಡೆಯಾಗಿ ಇದೀಗ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಹೆರವಟ್ಟಾ ಹಾಗೂ ಬಸ್ ನಿಲ್ದಾಣದ ರಸ್ತೆಗಳ ಕೆಲಸವೂ ನನ್ನ ಅವಧಿಯಲ್ಲಿ ಮುಗಿದಿದೆ. ಇನ್ನು ನಮ್ಮ ಎ.ಬಿ.ಬಾಳಿಗಾ ಕಾಲೇಜಿನಿಂದ ವಿವೇಕನಗರಕ್ಕೆ ತೆರಳುವ ರಸ್ತೆ ಹಾಗೂ ಗುಡಾಳದ ರಸ್ಥೆ ಈ ಎರಡು ಕಾಮಗಾರಿಗಳು ಬಾಕಿ ಉಳಿದಿದ್ದು, ಗುತ್ತಿಗೆದಾರರು ಕೆಲಸ ಪ್ರಾರಂಭಿಸಬೇಕಿದೆ.
ನನ್ನ ಅವಧಿಯಲ್ಲಿ ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಓವರ್ ಹೆಡ್ ವಾಟರ್ ಟ್ಯಾಂಕ್ ಗಳನ್ನು ನಿರ್ಮಿಸಿಕೊಟ್ಟಿದ್ದೇವೆ. ಅಂತೆಯೇ ಚಿತ್ರಗಿಯ ಕಲ್ಗುಡ್ಡದಲ್ಲಿ 33 ಲಕ್ಷ ರೂ ಅನುದಾನದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಲಾಗಿದೆ. ಅಂತೆಯೇ ಕಿತ್ತೂರು ಚನ್ನಮ್ಮ ಉದ್ಯಾನದಲ್ಲಿಯೂ 33 ಲಕ್ಷ ರೂ ವೆಚ್ಚದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಲಾಗಿದೆ. ಗಿಬ್ ಹೈಸ್ಕೂಲ್ ಸಮೀಪ ಹೊಸ ವಾಲ್ ಅಳವಡಿಕೆಗೆ 25 ಲಕ್ಷ ರೂ ಮಂಜೂರು ಮಾಡಿಸಿ ಚಾಲನೆ ನೀಡಿದ್ದೆ. ಆದರೆ ಇಂದಿನ ಶಾಸಕರು ಈ ಕೆಲಸಗಳನ್ನು ಮಾಡಿದ್ದಾರೆ ಎಂಬ ತಪ್ಪು ತಿಳುವಳಿಕೆ ನಮ್ಮ ಜನರಲ್ಲಿ ಇದೆ. ಆಗಬೇಕಾದ ಕಾಮಗಾರಿಗಳು ಸಾಕಷ್ಟು ಇದೆ. ಆ ಕಾಮಗಾರಿಗಳನ್ನು ಮಂಜೂರು ಮಾಡಿಸುವ ಕೆಲಸವನ್ನು ಶಾಸಕರು ಮಾಡಲಿ. ಎಲ್ಲೊ ಒಂದು ಕಡೆಯಲ್ಲಿ ತೇಪೆ ಹಚ್ಚಿಕೊಂಡು ನಾವು ಈವರೆಗೆ ಬೋರ್ಡ್ ಹಾಕಿಸಿಕೊಂಡಿಲ್ಲ. ಆ ಅಭ್ಯಾಸ ಕೆಲವರಲ್ಲಿದೆ. ನಾನು ನನ್ನ ಅವಧಿಯಲ್ಲಿ ಮಾಡಿದಂತಹ ಕೆಲಸಗಳು ಎಲ್ಲಿಯೂ ಕಳಪೆಯಾಗಿದಂತೆ ನಿರ್ವಹಿಸಿಕೊಂಡು ಬಂದಿದ್ದೇನೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಈ ಕೆಲಸ ಆಗಲು ತಡವಾಗಿದೆ. ಮುಂದಿನ ದಿನದಲ್ಲಿ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಒತ್ತು ನೀಡಲಿ. ಕ್ಷೇತ್ರದ ಅಭಿವೃದ್ಧಿಯಾದರೆ ಅದು ಸಂತಸದ ಸಂಗತಿ.ಇನ್ನಷ್ಟು ಅಭಿವೃದ್ಧಿಗಳು ಆಗಲಿ.
ಈ ಸಂಧರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಸುರೇಶ್ ಎಂ.ಕೆ, ಮಧುಸೂಧನ್ ಶೇಟ್, ವಿ.ಎಲ್.ನಾಯ್ಕ, ಪುರಸಭಾ ಸದಸ್ಯ ಎಂ.ಟಿ.ನಾಯ್ಕ, ಸದಸ್ಯೆ ವಿನಯಾ ವಿನು ಜಾಜ್೯, ಚಂದ್ರಹಾಸ ನಾಯ್ಕ, ನಾಗರಾಜ ನಾಯ್ಕ, ದಾಕ್ಷಾಯಿಣಿ ಅರಿಗಾ, ಕಾಂತರಾಜ ನಾಯ್ಕ, ಗಣಪತಿ ಶೆಟ್ಟಿ, ದತ್ತಾತ್ರೇಯ ಶೆಟ್ಟಿ, ವಿನು ಜಾರ್ಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.