ಕುಮಟಾ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕರಾದ ದಿನಕರ ಶೆಟ್ಟಿ ಮಾಜಿ ಶಾಸಕರ ವಿರುದ್ದ ಹರಿ ಹಾಯ್ದಿದ್ದಾರೆ.ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಸಹಿಸಲಾಗದೇ ಮಾಜಿ ಶಾಸಕಿ ಶಾರದಾ ಶೆಟ್ಟಿ ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಪಟ್ಟಣದ ರಥಬೀದಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯ ಪರಿಶೀಲನೆ ನಡೆಸಿ, ಮಾಧ್ಯಮದವರಿಗೆ ಅರ್ಥವಿಲ್ಲದ ಹೇಳಿಕೆ ನೀಡಿದ್ದಾರೆ. ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿ, ನನ್ನನ್ನು ಬಹುಮತದಿಂದ ಗೆಲ್ಲಿಸಿದ್ದಾರೆ. ಶಾರದಾ ಶೆಟ್ಟಿಯವರು ಇಲ್ಲಸಲ್ಲದ ಆರೋಪ ಮಾಡುವ ಬದಲು, ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಲಿ ಎಂದು ಲೇವಡಿ ಮಾಡಿದರು.
ಮಾಜಿ ಶಾಸಕಿ ಮಾನ-ಮರ್ಯಾದೆ ಬಿಟ್ಟು ಸುಳ್ಳು ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಾಲೂಕಾ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ನನ್ನ ಅವಧಿಯಲ್ಲಿಯೇ ಮೇಲ್ದರ್ಜೆಗೇರಿಸಲಾಗಿತ್ತು. ಅಲ್ಲದೇ, ಆ ಸಮಯದಲ್ಲಿ ಕುಮಟಾ-ಹೊನ್ನಾವರ ತಾಲೂಕಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಆದರೆ ಎಲ್ಲಿಯೂ ಹೋಗಿ ಇದು ನಾನೇ ಮಂಜೂರಿ ಮಾಡಿಸಿದ್ದೇನೆ ಎಂದಿಲ್ಲ.ನನ್ನ ಹಿಂದಿನ ಶಾಸಕತ್ವದ ಅವಧಿಯಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದಿಂದ ಕಾಂಕ್ರೀಟ್ ರಸ್ತೆಗೆ 5.5 ಕೋಟಿ ರೂ. ಅನುದಾನ ಮಂಜೂರಿ ಮಾಡಿಸಿದ್ದೆ. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಕಾರಣದಿಂದ ಕಾಮಗಾರಿ ನಡೆಸಲು ವಿಳಂಭವಾಗಿತ್ತು. ನಂತರ ಶಾರದಾ ಶೆಟ್ಟಿ ಶಾಸಕರಾದರು. ನನ್ನ ಅವಧಿಯಲ್ಲಿಯೇ ಮಂಜೂರಾದ ಕಾಮಗಾರಿಯನ್ನು ಇವರು ಮುಂದುವರೆಸಲಿಲ್ಲವೇ. ಇಷ್ಟೇಲ್ಲ ಸೊಕ್ಕು ಅವರಲ್ಲಿದ್ದರೆ ಆ ಸಂದರ್ಭದಲ್ಲಿ ಇದನ್ನೂ ಸಹ ಹೇಳಬೇಕಾಗಿತ್ತು ಎಂದು ಸವಾಲೆಸೆದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಜಿ.ಪಂ ಸದಸ್ಯ ಗಜಾನನ ಪೈ ಪ್ರಮುಖರಾದ ವಿನೋದ ಪ್ರಭು, ಮದನ ನಾಯಕ ಇನ್ನಿತರರು ಇದ್ದರು.