ಹೊನ್ನಾವರ: ಗೇರಸೊಪ್ಪಾ ಸೀಮೆಯಲ್ಲಿ ಪ್ರಪ್ರಥಮ ಬಾರಿಗೆ ರಥೋತ್ಸವ ಪ್ರಾರಂಭವಾದ ಹೆಗ್ಗಳಿಕೆ ಇರುವ ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀಕ್ಷೇತ್ರ ಬೆಳ್ಳಿಮಕ್ಕಿಯಲ್ಲಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಶ್ರೀದೇವರ ಸನ್ನಿಧಿಯಲ್ಲಿ ವೇ.ಮೂ.ಕಟ್ಟೆ ಶಂಕರ ಭಟ್ಟರ ಆಚಾರ್ಯತ್ವ ಮತ್ತು ವಿ.ಗಣಪತಿ ಹೇರಂಭ ಭಟ್ಟ ಇವರ ಪೌರೋಹಿತ್ಯದಲ್ಲಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕುಂಭಾಭಿಷೇಕ, ಅಧಿವಾಸಾದಿ ಹೋಮಗಳು, ರಥಶುದ್ಧಿ, ಮಧ್ಯಾಹ್ನ ಮಹಾಪೂಜೆ, ಪಲ್ಲಕ್ಕಿ ಉತ್ಸವ, ಬಲಿ, ಬ್ರಹ್ಮರಥೋತ್ಸವ ನಡೆಯಿತು. ರಾತ್ರಿ ಮೃಗಬೇಟೆ, ಅಷ್ಟಾವಧಾನ, ಪ್ರವೇಶರಾತ್ರಿ ಪೂಜೆ, ಮಹಾಬಲಿ ಮತ್ತು ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ನಡೆಯಿತು. ಆಹ್ವಾನಿತ ಕಲಾ ತಂಡಗಳ ನೃತ್ಯವು ರಥೋತ್ಸವದ ಮೆರವಣಿಗೆಗೆ ರಂಗು ನೀಡಿತು. ರಥೋತ್ಸವದಲ್ಲಿ ಪ್ರಧಾನ ಅರ್ಚಕ ವೇ.ಮೂ. ನಾಗೇಶ ಭಟ್ಟ, ಆಡಳಿತ ಮಂಡಳಿ ಅಧ್ಯಕ್ಷ ನವೀನ ನಾಡಕರ್ಣಿ, ಪ್ರಧಾನ ಕಾರ್ಯದರ್ಶಿ ಶ್ರೀರಾಮ ಭಟ್ಟ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡು ಶೃದ್ಧಾ ಭಕ್ತಿ ಮೆರೆದರು.