ಕುಮಟಾ : ಬೆಂಕಿಯಿಂದ ಅರಣ್ಯ ರಕ್ಷಣೆ ಹಾಗೂ ಕ್ಯಾಸನೂರು ಕಾಡಿನ ಕಾಯಿಲೆ ನಿಯಂತ್ರಣ ಕುರಿತು ಮಾಹಿತಿ ಕಾರ್ಯಾಗಾರವನ್ನು ಕತಗಾಲ ವಲಯದ ವನದುರ್ಗಾದೇವಸ್ಥಾನ ಬೆಳ್ಳಂಗಿಯಲ್ಲಿ ಆಯೋಜಿಸಲಾಗಿತ್ತು.
ಪ್ರವೀಣಕುಮಾರ ಬಸ್ರೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕುಮಟಾ ಉಪ ವಿಭಾಗ, ಕುಮಟಾ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಡಿನ ಬೆಂಕಿಯಿಂದ ಆಗುವ ಅನಾಹುತ ಬಗ್ಗೆ ವಿವರಿಸಿ ಕತಗಾಲ ಅರಣ್ಯವು ಸೂಕ್ಷ್ಮ ಅರಣ್ಯ ಪ್ರದೇಶವಾಗಿದ್ದು. ವನ್ಯ ಜೀವಿಗಳ ತಾಣವಾಗಿರುತ್ತದೆ. ಈ ಅರಣ್ಯ ಪ್ರದೇಶದಲ್ಲಿ ಜೀವವೈವಿದ್ಯತೆ ಉತ್ತಮವಾಗಿರುತ್ತದೆ. ಅರಣ್ಯವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿರುತ್ತದೆ. ಅರಣ್ಯಕ್ಕೆ ಯಾವುದೇ ರೀತಿಯಲ್ಲಿ ಬೆಂಕಿ ಬೀಳದಂತೆ ನಿಯಂತ್ರಿಸುವ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಲಾಯಿತು. ಬೆಂಕಿ ಬೀಳದಂತೆ ಮುಂಜಾಗ್ರತವಾಗಿ ಬೆಂಕಿ ರೇಖೆ ತೆಗೆಯಬೇಕೆಂದು ವಿವರಿಸಿದರು. ಸಾರ್ವಜನಿಕರು ಕಾಡಿನಲ್ಲಿ ಸಂಚರಿಸುವಾಗ ಮಂಗನ ಕಾಯಿಲೆಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೆಂಕೆಂದು ಸವಿಸ್ತರವಾಗಿ ವಿವರಿಸಿದರು.
ಶ್ರೀಮತಿ ಡಾ. ಚೈತ್ರಪ್ರಭಾ, ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಕತಗಾಲ ರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಂಗನ ಕಾಯಿಲೆಯು ಸಾಂಕ್ರಾಮಿಕ ರೋಗವಲ್ಲದಿದ್ದರೂ, ಇದೊಂದು ಬಹಳ ಗಂಭೀರವಾದ ರೋಗವಾಗಿದ್ದು, ಮುಂಜಾಗ್ರತವಾಗಿ ಚುಚ್ಚು ಮದ್ದನ್ನು ಪಡೆಯಬೇಕು ಎಂದು ತಿಳಿಸಿದರು. ಚುಚ್ಚು ಮದ್ದು ಪ್ರಥಮ ಹಂತವಾಗಿ 2 ಸಲ ಪಡೆಯಬೇಕು. ಅದರಂತೆ 9-12 ತಿಂಗಳ ಒಳಗೆ ಮತ್ತೊಮ್ಮೆ ಪಡೆಯಬೇಕು ಎಂದರು.
ಶ್ರೀ ಪ್ರಭಾಕರ ಕಾಗಿನೆಲ್ಲಿ, ವಲಯ ಅರಣ್ಯಾಧಿಕಾರಿ ಕತಗಾಲ ರವರು ಮಾತನಾಡಿ, ಎಲ್ಲರನ್ನು ಸ್ವಾಗತಿಸಿ ಕತಗಾಲ ಅರಣ್ಯ ಪ್ರದೇಶದಲ್ಲಿ ಬೆಂಕಿ ಬೀಳದಂತೆ ಈಗಾಗಲೇ ಬೆಂಕಿ ರೇಖೆ ನಿರ್ಮಿಸುವ ಕಾರ್ಯ ಮಾಡಲಾಗುತ್ತಿದ್ದು, ಯಾವುದೇ ರೀತಿಯಲ್ಲಿ ಅರಣ್ಯಕ್ಕೆ ಬೆಂಕಿ ಬೀಳದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಸ್ಥಳೀಯರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿದರು.
ಶ್ರೀ ಬಿ.ಎನ್. ಬಂಕಾಪುರ ಉಪ ವಲಯ ಅರಣ್ಯಾಧಿಕಾರಿ ಕತಗಾಲ ರವರು ಕಾರ್ಯಕ್ರಮವನ್ನು ಸಂಘಟಿಸಿ ಅರಣ್ಯವನ್ನು ಬೆಂಕಿಯಿಂದ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. ಶ್ರೀ ಉದಯ ಎಸ್. ದೇಶಭಂಡಾರಿ ಅದ್ಯಕ್ಷರು, ಗ್ರಾ.ಅ.ಸ. ಬೆಳ್ಳಂಗಿ ಸಭಾದ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಶ್ರೀ ದುರ್ಗು ಹರಿಕಂತ್ರ ಸುಗಮಗಾರರು ಕುಮಟಾ ಉಪ ವಿಭಾಗ ರವರು ಕಾರ್ಯಕ್ರಮವನ್ನು ನಿರೂಪಿಸಿ ಸಭೆಗೆ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಎಲ್ಲಾ ಸಿಬ್ಬಂದಿಗಳು, ಬೆಳ್ಳಂಗಿ ಗ್ರಾಮ ಅರಣ್ಯ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.