ಅಂಕೋಲಾ: ಕೈಕಾಲು ಕಟ್ಟಿ ವೃದ್ಧ ದಂಪತಿಯ ಹತ್ಯೆ ಮಾಡಿರುವ ಅಮಾನವೀಯ ಘಟನೆ ಅಂಕೋಲಾ ತಾಲ್ಲೂಕಿನ ಮೊಗಟಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಂದ್ಲೆ ಗ್ರಾಮದಲ್ಲಿ ನಡೆದಿದೆ.
ಮೊಗಟಾ ಗ್ರಾಮದ ನಿವಾಸಿಗಳಾದ ನಾರಾಯಣ ಬೊಮ್ಮಯ್ಯ ನಾಯ್ಕ ಮತ್ತು ಸಾವಿತ್ರಿ ನಾಯ್ಕ ಕೊಲೆಯಾದ ದುರ್ದೈವಿಗಳಾಗಿದ್ದು, ಶುಕ್ರವಾರ ತಡರಾತ್ರಿ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ.
ಮನೆಯಲ್ಲಿ ರಾತ್ರಿ ವೇಳೆ ಇಬ್ಬರೇ ಇದ್ದ ಸಂದರ್ಭದಲ್ಲಿ ದಂಪತಿಯನ್ನು ಕಟ್ಟಿಹಾಕಿ ಹತ್ಯೆ ನಡೆಸಲಾಗಿದ್ದು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನ ಸಹ ದೋಚಿಕೊಂಡು ಹೋಗಲಾಗಿದೆ.
ಬೆಳಿಗ್ಗೆ ವೇಳೆ ನೆರೆ ಮನೆಯವರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದ್ದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಂಕೋಲಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೊಲೆಯಾದ ದಂಪತಿ ಬಳಿ ತೋಟ ಹಾಗೂ ಅಪಾರ ಆಸ್ತಿ ಇದ್ದು ಆಸ್ತಿಗಾಗಿಯೇ ಹತ್ಯೆ ಮಾಡಲಾಗಿದೆಯಾ ಎನ್ನುವ ಶಂಕೆ ಸಹ ವ್ಯಕ್ತವಾಗಿದೆ. ಘಟನೆ ಸಂಬಂಧ ಅಂಕೋಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಬೇಕಿದೆ.