ಕಾರವಾರ: ನಾಡಿನ ಹಿರಿಯ ವಿಮರ್ಶಕ ಪ್ರೊ. ಎಲ್.ಎಸ್.ಶೇಷಗಿರಿ ರಾವ್ ಅವರ ನಿಧನ ನೋವಿನ ಸಂಗತಿಯಾಗಿದ್ದು, ಯುವ ಬರಹಗಾರರು ಅವರ ನಿಘಂಟು ಮತ್ತು ವಸ್ತುನಿಷ್ಠ ವಿಮರ್ಶೆಯನ್ನು ಅಧ್ಯಯನ ಮಾಡುವ ಮೂಲಕ ತಮ್ಮ ಜ್ಞಾನಕಕ್ಷೆಯನ್ನು ವಿಸ್ತರಿಸಿಕೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಭಿಪ್ರಾಯಪಟ್ಟಿದ್ದಾರೆ.
ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಅವರು ವಿಮರ್ಶಾ ಪ್ರಕಾರದ ಹೊರತಾಗಿ ಭಾಷಾಶಾಸ್ತ್ರದಲ್ಲಿ ಬಹುದೊಡ್ಡ ಹೆಸರು. ನಡೆದಾಡುವ ನಿಘಂಟು ಎಂದೇ ಪ್ರಸಿದ್ಧರಾದ ಅವರು ಕನ್ನಡ-ಇಂಗ್ಲಿಷ್ ಮತ್ತು ಇಂಗ್ಲಿಷ್-ಕನ್ನಡ ನಿಘಂಟುಗಳ ಹಲವಾರು ಸಂಪುಟವನ್ನು ತಂದು ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ. ಇದೀಗ ಅವರ ನಿಧನ ಬಾಷಾಶಾಸ್ತ್ರಕ್ಕೆ ಬಹುದೊಡ್ಡ ಕೊರತೆ ಎಂದು ಕರ್ಕಿಕೋಡಿ ತಿಳಿಸಿದ್ದಾರೆ.
2007 ಡಿಸೆಂಬರ್‍ನಲ್ಲಿ ಉಡುಪಿಯಲ್ಲಿನ ನಡೆದ 74ನೇ ಅಖಿಲ ಬಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರಾವಳಿ ಅಭಿವೃದ್ಧಿಗಾಗಿ ಒಂದು ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಗೋಷ್ಠಿಯಲ್ಲಿ ಎಲ್ಲ ಪ್ರಬಂಧಮಂಡನಕಾರರು ಕೇವಲ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅಭಿವೃದ್ಧಿ ಮಾತ್ರ ಪ್ರಸ್ತಾಪ ಮಾಡಿ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಸೊಲ್ಲು ಎತ್ತದೇ ಜಾರಿಕೊಳ್ಳುತ್ತಿದ್ದರು. ಆಗ ತಾವು ಗೆಳೆಯರೊಂದಿಗೆ ವೇದಿಕೆ ಏರಿ ಪ್ರತಿಭಟಿಸಿದಾಗ ಸಮ್ಮೇಳನಾಧ್ಯಕ್ಷ ಸ್ಥಾನದಲ್ಲಿದ್ದ ಪ್ರೊ. ಎಲ್.ಎಸ್.ಶೇಷಗಿರಿರಾಯರು ಪ್ರಬಂಧಮಂಡನಕಾರರನ್ನು ತರಾಟೆಗೆ ತಗೆದುಕೊಂಡು ಆ ಗೋಷ್ಠಿಯನ್ನೇ ನಿಲ್ಲಿಸಿ ಉತ್ತರ ಕನ್ನಡದ ಧ್ವನಿಗೆ ನ್ಯಾಯ ಸಲ್ಲಿಸಿ ನಿಷ್ಠುರತೆ ಮೆರೆದಿದ್ದರು ಎಂದು ಅರವಿಂದ ಕರ್ಕಿಕೋಡಿ ಸ್ಮರಿಸಿಕೊಂಡರು.