ಹೊನ್ನಾವರ: ಸಮುದ್ರ ಕೊರೆತ, ಉಪ್ಪು ನೀರಿನ ಹಾವಳಿ ಸೇರಿದಂತೆ ಹಲವು ಸಮಸ್ಯೆಗಳಿಂದ ನಲುಗಿರುವ ಕರ್ಕಿ ಗ್ರಾಮದ ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಡಿ.23ರಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
‘ಕರ್ಕಿ ಗ್ರಾಮದ ಅಸ್ತಿತ್ವಕ್ಕಾಗಿ ಹೋರಾಟ’ ಎಂಬ ಘೋಷಣೆಯೊಂದಿಗೆ ಹೋರಾಟ ಸಮಿತಿ ರಚನೆಯಾಗಿದ್ದು ಸಮಿತಿಯ ಸದಸ್ಯರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಊರಿನ ದುಃಸ್ಥಿತಿ ಹಾಗೂ ಹಾಗೂ ತಮ್ಮ ಹೋರಾಟದ ರೂಪು-ರೇಷೆಯ ಕುರಿತು ವಿವರ ನೀಡಿದರು.
30 ವರ್ಷಗಳ ಹಿಂದೆ ಹಾಕಿದ್ದ ಸಮುದ್ರ ತಡೆಗೋಡೆ ಕುಸಿದಿದ್ದು ಕರ್ಕಿ ಗ್ರಾಮ ವ್ಯಾಪ್ತಿಯ ಕೆಸರಕೋಡಿ, ಪಾವಿನಕುರ್ವ, ತೊಪ್ಪಲಕೇರಿ, ಹೆಗಡೆಹಿತ್ಲ ಮಜರೆಗಳಲ್ಲಿ ಸಮುದ್ರ ಕೊರೆತ ವ್ಯಾಪಕವಾಗಿದೆ. ರಾಮೇಶ್ವರಕಂಬಿ, ಶೇಡಿಕುಳಿ, ಬೇಲೆಗದ್ದೆ, ಕೋಣಕಾರ, ಅಪ್ಪೆಕೆರೆ, ದುಗ್ಗೂರು, ಶೀಕಾರ ಮೊದಲಾದ ಮಜರೆಗಳು ಉಪ್ಪು ನೀರಿನಿಂದ ಆವೃತವಾಗುತ್ತಿವೆ. ಸಮುದ್ರ ಭೂಭಾಗಗಳನ್ನು ಅತಿಕ್ರಮಿಸುತ್ತಿರುವುದು, ಬಡಗಣಿ ಹೊಳೆಯಲ್ಲಿ ಸಿಹಿ ನೀರಿನ ಹರಿವು ತಗ್ಗಿರುವುದು ಹಾಗೂ ಗಜನಿಗಳಲ್ಲಿ ಶೆಟ್ಲಿ ಬೇಸಾಯ ಉಪ್ಪು ನೀರಿನ ಹಾವಳಿಗೆ ಕಾರಣ’ ಎಂದು ಹೇಳಿದರು.
ಶಾಶ್ವತ ತಡೆಗೋಡೆ ನಿರ್ಮಿಸಿ ಸಮುದ್ರ ಕೊರೆತ ತಡೆಗಟ್ಟಬೇಕು. ಅರೆಸಾಮಿ ಕೆರೆಯನ್ನು ಅಭಿವೃದ್ಧಿಪಡಿಸಬೇಕು. ಶೆಟ್ಲಿ ಗಜನಿಗಳನ್ನು ತೆರವುಗೊಳಿಸಬೇಕು. ಪಾವಿನಕುರ್ವ ಬಳಿ ಬಡಗಣಿ ಹೊಳೆಗೆ ಚೆಕ್ ಡ್ಯಾಮ್ ನಿರ್ಮಿಸಿ ಉಪ್ಪು ನೀರು ನುಗ್ಗದಂತೆ ತಡೆಯಬೇಕು. ಊರಿನಲ್ಲಿ ಗಿಡ-ಮರಗಳನ್ನು ಬೆಳೆಸಬೇಕು ಎಂಬಿತ್ಯಾದಿ ಬೇಡಿಕೆಗಳ ಪಟ್ಟಿಯನ್ನು ಅವರು ಮುಂದಿಟ್ಟರು.
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.23ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಸಾಂಕೇತಿಕ ರಸ್ತೆ ತಡೆ, ಜಿಲ್ಲಾಧಿಕಾರಿಗೆ ಮನವಿ ಸಮರ್ಪಣೆ ನಡೆಯಲಿದೆ.
ಸಮಿತಿಯ ಸದಸ್ಯರಾದ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ, ಕರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ಮೊಗೇರ, ತಾಲ್ಲೂಕು ಪಂಚಾಯಿತಿ ಸದಸ್ಯ ತುಕಾರಾಮ ನಾಯ್ಕ, ಕಾರ್ಮಿಕ ಮುಖಂಡ ಹರಿಶ್ಚಂದ್ರ ನಾಯ್ಕ ಹಾಜರಿದ್ದರು.