ಹನುಮಸಾಗರದಲ್ಲಿ ರಾಮಯ್ಯನೆಂಬ ಕವಿ ಇದ್ದನು. ಅವನು ಎಲ್ಲರೂ ಮೆಚ್ಚುವಂತೆ ಕವನ ಬರೆಯುತ್ತಿದ್ದನು. ಅವನು ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದನು. ಪದದ ಮೇಲೆ ಒತ್ತು, ಧ್ವನಿಯ ಏರಿಳಿತ, ಭಾವ ಹೊರಹೊಮ್ಮಿಸುವ ರೀತಿಯಿಂದಾಗಿ ಅವನ ಕವನ ವಾಚನ ಎಲ್ಲರಿಗೂ ಪ್ರಿಯವಾಗಿತ್ತು. ಅವನಿಗೆ ಬಹಳಷ್ಟು ಪ್ರಶಸ್ತಿ ಬಹುಮಾನ ಬಂದವು. ಅವನು ‘ಖ್ಯಾತಕವಿ’ ಎಂದು ಪ್ರಸಿದ್ಧನಾದನು. ಆದರೆ ಖ್ಯಾತಕವಿ ಎಂಬ ‘ಅಹಂ’ ಅವನ ತಲೆಗೇರಿತು.

ಒಂದು ಸಲ ರಾಮಯ್ಯನು ಮುಖ್ಯ ಅತಿಥಿಯಾಗಿ ಒಂದು ಕಾರ‌್ಯಕ್ರಮಕ್ಕೆ ಹೋದನು. ತನ್ನ ಸರದಿ ಬಂದಾಗ ಅವನು ತನ್ನ ಬಗೆಗೆ ಹೇಳಿಕೊಳ್ಳತೊಡಗಿದನು. ‘ನಾನು ಖ್ಯಾತಕವಿ. ನಾನು ಹತ್ತಾರು ಪುಸ್ತಕಗಳನ್ನು ಪ್ರಕಟಿಸಿದ್ದೇನೆ. ಕೆಲವು ಪುಸ್ತಕಗಳಿಗೆ ಬಹುಮಾನ ಬಂದಿವೆ. ಕೆಲವರಿಗೆ ಕವನ ಬರೆಯಲು ಬರುವುದೇ ಇಲ್ಲ. ನಾನು ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದೇನೆ. ಹಲವಾರು ಕಾರ‌್ಯಕ್ರಮಗಳಲ್ಲಿ ನನ್ನನ್ನು ಸತ್ಕರಿಸಿದ್ದಾರೆ’ ಎಂದು ಹೇಳತೊಡಗಿದ್ದು ಎಲ್ಲರಿಗೂ ಬೇಸರವೆನಿಸಿತು. ಅಗ ಕಾರ‌್ಯಕ್ರಮ ನಿರೂಪಕರು ‘ಮಾತಿನ ಮಹತ್ವ ಕುರಿತು ಹೇಳಿರಿ ನಿಮ್ಮ ವೈಯಕ್ತಿಕ ವಿಷಯ ಬೇಡ’ ಎಂದು ಚಿಕ್ಕ ಚೀಟಿ ಕೊಟ್ಟರೂ ಪ್ರಯೋಜನವಾಗಲಿಲ್ಲ . ತಮ್ಮ ವೈಯಕ್ತಿಕ ವಿಷಯ ಮುಂದುವರೆಸಿದನು. ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆ ಆದರೂ ರಾಮಯ್ಯ ತನ್ನನ್ನು ತಾನೇ ಹೊಗಳಿಕೊಳ್ಳತೊಡಗಿದನು. ರಾಮಯ್ಯನು ಸಮಯದ ಸದುಪಯೋಗಪಡಿಸಿಕೊಳ್ಳದಿರಲು ಅಧ್ಯಕ್ಷರೇ ಭಾಷಣ ನಿಲ್ಲಿಸಲು ಸೂಚಿಸಿದರು. ರಾಮಯ್ಯನಿಗೆ ಅವಮಾನವಾದಂತಾಯಿತು.

RELATED ARTICLES  ಭೀಕರ ಅಪಘಾತ : ಬೈಕ್ ಸವಾರನ ಮೇಲೆ ಹರಿದುಹೋದ ಲಾರಿ.

ಅಧ್ಯಕ್ಷರು ತಮ್ಮ ಭಾಷಣ ಪ್ರಾರಂಭಿಸಿದರು. ‘ಮಾನ್ಯರೇ, ನಮ್ಮನ್ನು ನಾವೇ ದೊಡ್ಡವರೆಂದು ತಿಳಿದುಕೊಳ್ಳುವುದು ಮೂರ್ಖತನ. ಹೆಚ್ಚಿನ ಘನತೆ, ಗೌರವ ಬಯಸಬಾರದು. ಅಂಥ ವ್ಯಕ್ತಿಯು ಅಪಹಾಸ್ಯಕ್ಕೆ, ಅವಮಾನಕ್ಕೆ ಗುರಿಯಾಗಬಹುದು. ನಾವು ಹೆಚ್ಚಿನ ಪ್ರಾಮುಖ್ಯತೆಗಾಗಿ ಗೊಣಗುವುದರಿಂದ ಅದು ನಮ್ಮ ಸಾಧನೆ, ಶ್ರೇಯಸ್ಸಿಗೆ ದೊಡ್ಡ ಮುಳ್ಳಾಗುತ್ತದೆ. ‘ಕೀರ್ತಿಶನಿ’ ತೊಲಗಾಚೆ ಎಂಬ ಭಾವವಿರಬೇಕು. ನಮ್ಮ ಮಾತು ಸಮಯೋಚಿತವಾಗಿರಬೇಕು. ಬಾಯಿ ಚಪಲ ತೀರಿಸಿಕೊಳ್ಳುವುದು ಸರಿಯಲ್ಲ . ಸಮಯೋಚಿತ ಮಾತಿನಿಂದ ಜನರ ಪ್ರೀತಿ , ಮೆಚ್ಚುಗೆ ದೊರೆಯುತ್ತದೆ. ಸಮಯದ ಸದುಪಯೋಗವಾಗುತ್ತದೆ. ವ್ಯರ್ಥ ಸಮಯ ಹಾಳಾಗುವುದಿಲ್ಲ. ಎಲ್ಲರಿಗೂ ತಮ್ಮ ವಿಷಯ ಮಂಡಿಸಲು ಅನೂಕೂಲವಾಗುತ್ತದೆ. ಚಿಕ್ಕ ಚೀಟಿ ಬರುವ ಮುನ್ನ ತಮ್ಮ ಭಾಷಣ ಮುಗಿಸಬೇಕು. ಕೊಟ್ಟ ಅವಧಿ ಮೀರದಂತೆ ಹೇಳುವುದೆ ವಾಗ್ಮಿಗೆ ಭೂಷಣ. ವಾಗ್ಮಿಗಳಿಗೆ ಸಮಯಪ್ರಜ್ಞೆ ಇರಬೇಕು. ಸಭಿಕರೆಲ್ಲ ಮೆಚ್ಚುವಂತೆ ಚಿಕ್ಕದಾಗಿ ಚೊಕ್ಕದಾಗಿ ಹೇಳಬೇಕು. ವಿಷಯಕ್ಕೆ ಸಂಬಂಧವಿಲ್ಲದ ವಿಷಯ ಮಾತನಾಡಿ ಸಮಯ ವ್ಯರ್ಥ ಹಾಳು ಮಾಡುವುದರಿಂದ ಜನರಿಗೆ ಬೇಸರವಾಗುವುದು. ಭಾಷಣ ಪ್ರಾರಂಭಿಸುವುದರಲ್ಲಿಯೂ ಜಾಣತನವಿದೆ. ವೇದಿಕೆಯ ಮೇಲಿದ್ದವರ ಹೆಸರು ಹೇಳದೆ ಗಣ್ಯ ಮಾನ್ಯರೇ, ಸಾಹಿತ್ಯಾಭಿಮಾನಿಗಳೇ ಎಂದು ಭಾಷಣ ಪ್ರಾರಂಭಿಸಿದಲ್ಲಿ ಸಮಯ ವ್ಯರ್ಥವಾಗುವುದಿಲ್ಲ.

RELATED ARTICLES  ಅಬ್ಬಬ್ಬಾ ಇದೆಂತಾ ಕಳ್ಳತನ..!

ಮಾತಿಗೆ ಮೂರುಲೋಕ ಗೆಲ್ಲುವ ಶಕ್ತಿಯುಂಟು. ಮಾತಿನಿಂದ ನಗೆಯೂ, ಹೊಗೆಯೂ ಉಂಟು. ನುಡಿದರೆ ಮುತ್ತಿನ ಹಾರದಂತಿರಬೇಕು. ಮಾತು ಮಿತವಾಗಿರಬೇಕು, ಹಿತವಾಗಿರಬೇಕು. ನಾವು ಹೇಳುವ ಮಾತು ಜೊಳ್ಳಾಗಿರಬಾರದು. ಮಾತಿನಲ್ಲಿ ಸತ್ವ , ತತ್ವ ಅಡಗಿರಬೇಕು. ಎಲ್ಲರೂ ಮೆಚ್ಚಿ ಹೌದು ಹೌದು ಎನ್ನುವಂತಿರಬೇಕು. ನಮ್ಮ ಮಾತು ಜನರಲ್ಲಿ ವೈಷಮ್ಯಭಾವ ಮೂಡುವಂತಿರಬಾರದು. ಯಾವುದೇ ರೀತಿಯ ಪ್ರಚೋದನೆಗಳಿಗೆ ಅವಕಾಶವಿರಬಾರದು . ‘ನಾವು ಜಾಣರು ‘ ಎಂದು ತೋರಿಸಲು ಅನವಶ್ಯಕ ವಿಷಯ ಮಾತನಾಡಬಾರದು. ತಮಗೆ ಕೊಟ್ಟ ವಿಷಯದತ್ತ ಗಮನವಿರಬೇಕು. ತಮ್ಮ ವೈಯಕ್ತಿಕ ವಿಷಯ ಮಾತನಾಡುವುದು ವೇದಿಕೆಗೆ ಭೂಷಣವಲ್ಲ. ಅನವಶ್ಯಕ ಮಾತುಗಳಿಂದ ‘ಮಾತು’ ತನ್ನ ತೂಕ ಕಳೆದುಕೊಳ್ಳುತ್ತದೆ. ಎಲ್ಲರಲ್ಲಿ ಸಮಯೋಚಿತ ಮಾತು, ಸಮಯ ಪ್ರಜ್ಞೆ ಇರಲಿ’ ಎಂದು ಅಧ್ಯಕ್ಷರು ಹೇಳಿದರು. ಅಧ್ಯಕ್ಷರ ಭಾಷಣದಿಂದ ಗರ್ವಭಂಗವಾದಂತಾಗಿ ರಾಮಯ್ಯನ ಮುಖ ಚಿಕ್ಕದಾಯಿತು.

ಕೃಪೆ :ಕಿಶೋರ್, ಸಂಗ್ರಹ :ವೀರೇಶ್ ಅರಸಿಕೆರೆ.