ಕುಮಟಾ: ಜಂಜಾಟದ ಜೀವನ, ಬದಲಾದ ಆಹಾರ ಪದ್ಧತಿ, ಒತ್ತಡ ಸೇರಿದಂತೆ ನಾನಾ ಕಾರಣಗಳಿಂದ ಮಾನವರ ಶರೀರ ರೋಗಗಳ ಗೂಡಾಗುತ್ತಿದೆ. ರೋಗ ಬಂದ ಬಳಿಕ ಕಾಳಜಿ ವಹಿಸುವುದಕ್ಕಿಂತ ಬರದಂತೆ ಕಾಳಜಿ ವಹಿಸುವ ಮನೋಭಾವ ಇಲ್ಲವಾಗಿದೆ. ಶರೀರದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗುವುದರಿಂದ ಎಲುಬು ಮತ್ತು ಮೂಳೆ ಸಂಬಂಧಿ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮೊಣಕಾಲು, ಮಂಡಿ ಚಿಪ್ಪು ಮತ್ತು ಚಪ್ಪೆ ಬದಲಾವಣೆ ಚಿಕಿತ್ಸೆ ದುಬಾರಿಯಾಗಿದ್ದು, ಇಂಥಹ ತಪಾಸಣೆ ಗ್ರಾಮೀಣ ಪ್ರದೇಶದಲ್ಲಿ ಉಚಿತವಾಗಿ ಸಿಗುತ್ತಿರುವುದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಪ್ರಯೋಜನಕಾರಿಯಾಗಿದೆ. ನಮ್ಮ ಇಚ್ಛೆಯೇ ಎಲ್ಲರೂ ಉತ್ತಮ ಆರೋಗ್ಯ ಭಾಗ್ಯ ಹೊಂದುವ ಮೂಲಕ ನೆಮ್ಮದಿಯ ಜೀವನ ಸಾಗಿಸುವಂತಾಗಬೇಕು ಎಂದು ಇಲ್ಲಿಯ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಕಸ್ತೂರಬಾ ಆಸ್ಪತ್ರೆ ಮಣಿಪಾಲ ಹಾಗೂ ಶ್ರೀ ಶಾಂತಿಕಾ ಪರಮೇಶ್ವರಿ ಭಕ್ತ ಮಂಡಳಿ ದೇವರಹಕ್ಕಲ ಕುಮಟಾ ಇವರ ಸಹಯೋಗದಲ್ಲಿ ಏರ್ಪಡಿಸಿದ ಉಚಿತ ಎಲುಬು ಮತ್ತು ಮೂಳೆ ತಪಾಸಣಾ ಶಿಬಿರ ಉದ್ಘಾಟಿಸಿ ದೇವಸ್ಥಾನದ ವ್ಯವಹಾರಿಕ ಮೊಕ್ತೇಸರ ಕೃಷ್ಣ ಬಾಬಾ ಪೈ ಅಭಿಪ್ರಾಯಪಟ್ಟರು.
ಮಣಿಪಾಲದ ಪ್ರಖ್ಯಾತ ವೈದ್ಯ, ಎಲುಬು ಮತ್ತು ಕೀಲು ತಜ್ಞ ಡಾ. ವಿವೇಕ ಪಾಂಡೆ ಮಾತನಾಡಿ ಸಂಘಟಕರ ಒತ್ತಾಸೆ ತನ್ನನ್ನು ಇಲ್ಲಿಗೆ ಕರೆತಂದಿದೆ ಎಂದರು. ಕಸ್ತೂರಬಾ ಆಸ್ಪತ್ರೆಯ ಡೆಪ್ಯುಟಿ ಮ್ಯಾನೆಜರ್ ಮೋಹನ ಶೆಟ್ಟಿ, ಬಡ ಹಾಗೂ ಕೂಲಿ ಕಾರ್ಮಿಕರಿಗೆ ನೆರವಾಗುವ ಸಾಕಷ್ಟು ಯೋಜನೆಗಳನ್ನು ತಿಳಿಸಿದರಲ್ಲದೇ, ಈ ಭಾಗದ ಜನರಿಗೆ ತುರ್ತು ಚಿಕಿತ್ಸೆ ದೊರೆಯುವಂತೆ ನೆರವಾಗುವುದಾಗಿ ಭರವಸೆ ನೀಡಿದರು. ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ರಾಜೇಂದ್ರ ನಾಯಕ, ಸಹವೈದ್ಯ ಕೇರಳದ ಡಾ. ಅಭಿಜಿತ್, ಉದ್ದಿಮೆದಾರ ಶ್ರೀಕಾಂತ ಭಟ್, ಭುವನ್ ಭಾಗ್ವತ, ಶಿವಾನಂದ ಗೌಡ, ಪ್ರೇಮಾನಂದ ನಾಯಕ, ಪುರಸಭಾ ಸದಸ್ಯ ಎಂ.ಟಿ.ನಾಯ್ಕ, ಅರ್ಚಕ ರಾಜು ಗುನಗಾ, ಅರುಣ ಗುನಗಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಊರ ಜನರ ಪರವಾಗಿ ಡಾ. ಪಾಂಡೆ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಮಂಜುನಾಥ ನಾಯ್ಕ ಸ್ವಾಗತಿಸಿ ನಿರೂಪಿಸಿದರು.