ಕುಮಟಾ: ಶಿವಮೊಗ್ಗದ ಶರಾವತಿ ಅಭಯಾರಣ್ಯಕ್ಕೆ ಕುಮಟಾ ತಾಲೂಕಿನ ಪ್ರದೇಶವನ್ನು ಸೇರಿಸಿರುವುದಕ್ಕೆ ಮತ್ತು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿ ತೀವ್ರ ವಿಲೇವಾರಿ ಆಗಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನಾ ರ್ಯಾಲಿ ಜ. 23 ಗುರುವಾರ ಮುಂಜಾನೆ 10.30 ಕ್ಕೆ ಸಂಘಟಿಸಲು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ಸ್ಥಳಿಯ ದೇವಕಿ ಕಾನಫರೆನ್ಸ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ತೀರ್ಮಾನಿಸಲಾಯಿತು.
7 ಹಳ್ಳಿಗಳು: 1000 ಕ್ಕೂ ಮಿಕ್ಕಿ ಕುಟುಂಬಗಳು.
ಕುಮಟಾ ತಾಲೂಕಿನ ವ್ಯಾಪ್ತಿಯ ಸೊಪ್ಪಿನಹೊಸಳ್ಳಿ, ಮೇದಿನಿ, ಹೆಕ್ಕಳಿ, ಮೋರ್ಸೆ, ಬಗಣಿ, ಮುದನಹಳ್ಳಿ, ಹುಳ್ಳೂರು ಮುಂತಾದ 7 ಹಳ್ಳಿಗಳ 5059.51 ಹೆಕ್ಟರ್ ಪ್ರದೇಶ ಶಿವಮೊಗ್ಗ ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಪ್ರದೇಶದ ಸುಮಾರು 1000 ಅರಣ್ಯ ಮತ್ತು ಕಂದಾಯ ಭೂಮಿಯಲ್ಲಿ ವಾಸ್ತವ್ಯ ಹಾಗೂ ಸಾಗುವಳಿ ಪ್ರದೇಶದಲ್ಲಿರುವ ಕುಟುಂಬಗಳು ಒಳಪಡುತ್ತದೆ ಎಂದು ರವೀಂಧ್ರ ನಾಯ್ಕ ಮಾಹಿತಿ ನೀಡಿದರು.ಶಿವಮೊಗ್ಗದ ಶರಾವತಿ ಅಭಯಾರಣ್ಯಕ್ಕೆ ಕುಮಟಾ ತಾಲೂಕಿನ ಗ್ರಾಮಗಳ ಪ್ರದೇಶವನ್ನು ಜನಾಭಿಪ್ರಾಯ ಸಂಗ್ರಹಿಸದೇ ಸೇರ್ಪಡೆಗೊಂಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಸಾಂದರ್ಭಿಕ ದಾಖಲೆಗಳ ಆಧಾರದ ಮೇಲೆ ಶೀಘ್ರಗತಿಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಯ ಅರ್ಜಿಯನ್ನು ವಿಲೇವಾರಿಗೊಳಿಸುವಂತೆ ರ್ಯಾಲಿ ಜರುಗಿಸುವ ಮೂಲಕ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ಹೇಳಿದ್ದಾರೆ.
ಅತಂತ್ರ: ಸದ್ರಿ ಪ್ರದೇಶದಲ್ಲಿ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಜನವಸತಿಗೆ ಮತ್ತು ಸಾಗುವಳಿಗೆ ಸಂಪೂರ್ಣವಾಗಿ ಗ್ರಾಮಸ್ಥರು ಹೊಂದಿಕೊಂಡಿರುವುದರಿಂದ ಅಭಯಾರಣ್ಯ ಯೋಜನೆಗೆ ಈ ಪ್ರದೇಶ ಸೇರ್ಪಡೆಗೊಂಡಿರುವುದರಿಂದ ಈ ಕ್ಷೇತ್ರದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಸಿಂಹ-ಬಾಲದ ಮಕಾಕ್ ಅನ್ನು ರಕ್ಷಿಸಲು ಶರಾವತಿ ಅಭಯಾರಣ್ಯದ ಗಡಿಯನ್ನು ವಿಸ್ತರಿಸಲಾಗಿದ್ದು ಇಂದು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಒಟ್ಟು 93,016 ಹೆಕ್ಟರ್ ಪ್ರದೇಶಕ್ಕೆ ಅಭಯಾರಣ್ಯ ವಿಸ್ತರಿಸಲಾಗಿದ್ದು ಗ್ರಾಮಸ್ಥರು ಅತಂತ್ರರಾಗುವ ಸಂದರ್ಭ ಬಂದಿದೆ ಎಂದು ತಿಳಿಸಿದರು.
ಶರಾವತಿ ಅಭಯಾರಣ್ಯಕ್ಕೆ ಸೇರಿಕೊಳ್ಳುವ ಪ್ರದೇಶವು ಸಂಪೂರ್ಣ ನಿರ್ಬಂಧಿತ ಪ್ರದೇಶವಾಗಿದ್ದು ಸದ್ರಿ ಪ್ರದೇಶದ ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆಯಲ್ಲಿ ಮಂಜೂರಿಗೆ ಆತಂಕ ಉಂಟಾಗು ವುದಲ್ಲದೇ, ಕಂದಾಯ ಭೂಮಿಯಲ್ಲಿ ಸ್ವಯಾರ್ಜಿತ ಆಸ್ತಿಯಲ್ಲಿ ಸಾಗುವಳಿ ಮಾಡುವವರೆಗೂ ಸ್ವತಂತ್ರತೆಗೆ ಧಕ್ಕೆ ಉಂಟಾಗುವುದು. ಸಾಮಾನ್ಯ ಜನಜೀವನವನ್ನು ಶರಾವತಿ ಅಭಯಾರಣ್ಯ ಸಂಪೂರ್ಣವಾಗಿ ನಿಯಂತ್ರಿಸುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅರಣ್ಯ ಹಕ್ಕು: ತೀವ್ರ ವಿಲೇವಾರಿಗೆ ಆಗ್ರಹ
ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು 12 ವರ್ಷವಾದರೂ ಮಂಜೂರಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದು ಕುಮಟಾ ತಾಲೂಕಿನಲ್ಲಿ ಒಟ್ಟೂ 6601 ಅರ್ಜಿ ಸ್ವೀಕಾರವಾಗಿದ್ದು ಅವುಗಳಲ್ಲಿ 135 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದ್ದು ಇರುತ್ತದೆ. ಬಂದಿರುವಂಥ ಅರ್ಜಿಗಳಲ್ಲಿ ಶೇ. 2.04 ರಷ್ಟು ಮಾತ್ರ ಮಾನ್ಯತೆ ದೊರಕಿದ್ದು ಇನ್ನುಳಿದ ಅರ್ಜಿಗಳು ವಿಲೆವಾರಿ ಆಗಬೇಕಾಗಿದ್ದು ತೀವ್ರ ಗತಿಯಲ್ಲಿ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನವನ್ನು ಸಾಂದರ್ಭಿಕ ದಾಖಲೆಗಳ ಆಧಾರದ ಮೇಲೆ ಮಂಜೂರಿಗೆ ಮಾನ್ಯತೆ ನೀಡಬೇಕೆಂದು ರ್ಯಾಲಿಯಲ್ಲಿ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ವೇದಿಕೆ ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ ಸ್ವಾಗತಿಸಿದರು. ಪ್ರಮುಖರಾದ ಸೀತಾರಾಮ ನಾಯ್ಕ ಬೊಗ್ರಿಬೈಲ್, sಸುರೇಶ ಪಟಗಾರ, ಮಹೇಂದ್ರ ನಾಯ್ಕ ಕತಗಾಲ, ಸೀತಾರಾಮ ಮರಾಠಿ ಯಾಣ,ಯಾಕೂಬ ಸಾಬ ಮಿರ್ಜಾನ, ಕೃಷ್ಣಾ ಮರಾಠಿ ಕಳವೆ, ಶಾಂತಾರಾಮ ಬಾಬು ನಾಯ್ಕ ಬಡಾಳ, ಶಾಂತಿ ಮುಕ್ರಿ ಮಿರ್ಜಾನ್, ನಾಗಮ್ಮ ನಾಯ್ಕ ಬಡಾಳ, ಸಂತೋಷ ಮರಾಠಿ ಬಂಗಣಿ, ಸಾರಾಂಬಿ ಬೆಟ್ಕುಳಿ ಮುಂತಾದವರು ಉಪಸ್ಥಿತರಿದ್ದರು.