ಕುಮಟಾ: ಇಂದು ಬಾಹ್ಯಾಕಾಶದಲ್ಲಿರುವ ಉಪಗ್ರಹವನ್ನು ಕ್ಷಿಪಣಿಯ ಮೂಲಕ ಹೊಡೆದುರುಳಿಸುವ ತಂತ್ರಜ್ಞಾನವನ್ನು ಭಾರತ ಅಭಿವೃದ್ಧಿ ಪಡಿಸಿದೆ. ಸರ್ಜಿಕಲ್ ಸ್ಟ್ರೈಕ್ ನಡೆಸಲು ನಮ್ಮ ದೂರಸಂವೇದಿ ಉಪಗ್ರಹದ ಪಾತ್ರ ಪ್ರಮುಖವಾಗಿತ್ತು ಎಂದು ಇಸ್ರೋದ ನಿವೃತ್ತ ವಿಜ್ಞಾನಿ ಹಾಗೂ ಯು.ಆರ್.ರಾವ್ ಸೆಟೆಲೈಟ್ ಸೆಂಟರ್‍ನ ಡೆಪ್ಯುಟಿ ಡೈರೆಕ್ಟರ್ ಪಿ.ಜೆ.ಭಟ್ಟ ಅವರು ತಿಳಿಸುತ್ತಾ ಈ ಸಾಧನೆ ಮಾಡಿದ ಜನತ್ತಿನ ನಾಲ್ಕನೇ ರಾಷ್ಟ್ರ ಅನ್ನೋ ಖ್ಯಾತಿ ನಮಗಿದ್ದು ಈ ತಂತ್ರಜ್ಞಾನ ಹೊಂದಿರುವ ಅಮೇರಿಕಾ, ರಷ್ಯಾ, ಚೀನಾಗಳ ಸಾಲಿಗೆ ಈಗ ನಾವು ಸೇರಿದ್ದು ಜಗತ್ತಿನ ಕೆಲವು ಪ್ರಬಲ ದೇಶಗಳಾದ ಇಂಗ್ಲೆಂಡ್, ಜಪಾನ್, ಫ್ರಾನ್ಸ್, ಜರ್ಮಿನಿಯಂತಹ ರಾಷ್ಟ್ರಗಳು ಮಾಡದ ಸಾಧನೆಯನ್ನು ನಾವು ಮಾಡಿದ್ದೇವೆ ಎಂದರು. ಇಸ್ರೋ ಮತ್ತು ಡಿಆರ್‍ಡಿಓ ಜಾಗತಿಕ ಮಟ್ಟದಲಿ ಅದ್ಭುತ ಸಾಧನೆಗೈಯುತ್ತಿದೆ ಎಂದರಲ್ಲದೇ ಬರಗಾಲದ ನಿಖರ ಮಾಹಿತಿ, ಮೀನುಗಾರರಿಗೆ ಉಪಯುಕ್ತ ಮುಮ್ಮಾಹಿತಿ ಸಂಪರ್ಕ ಮತ್ತು ದೂರಸಂವೇದಿ ಉಪಗ್ರಹಗಳಿಂದ ಲಭ್ಯವಾಗುತ್ತಿದೆ ಎಂದರು. ರಾಷ್ಟ್ರದ ಜನರ ನಿತ್ಯದ ಬೇಡಿಕೆ ಇಸ್ರೋ ಈಡೇರಿಸುವ ಗುರಿ ಹೊಂದಿದ್ದು, ಚಂದ್ರಯಾನ, ಮಂಗಳಯಾನದಂತಹ ಕಾರ್ಯಕ್ರಮಗಳಿಗೆ ಬಜೆಟಿನ ಕೇವಲ ಶೇ. 5 ರಷ್ಟು ಭಾಗ ಮಾತ್ರ ಮೀಸಲಿಡುತ್ತಿದೆ ಎಂದು ಸಮಜಾಯಿಸಿದರು. ಸದ್ಯದಲ್ಲಿಯೇ ಸೂರ್ಯ ವಾತಾವರಣ ಅಧ್ಯಯನಿಸಲು ಆದಿತ್ಯ-1 ರ ಉಡಾವಣೆಯ ಸಿದ್ಧತೆಯಲ್ಲಿ ಇಸ್ರೋ ಇರುವುದಾಗಿಯೂ ಕೆಲ ಉಪಗ್ರಹಗಳ ಉಡಾವಣಾ ವೈಫಲ್ಯಗಳ ಬಗ್ಗೆ ಕೇಳಿದ ಗಮನಸೆಳೆವ ವಿದ್ಯಾರ್ಥಿಗಳ ಪ್ರಶ್ನೆಗೆ ನಗುನಗುತ್ತಾ ಉತ್ತರಿಸಿದರು.

RELATED ARTICLES  ಶ್ರೀಮಯ ಯಕ್ಷಗಾನ ಗುರುಕುಲ ಕಲಾ ಕೇಂದ್ರಕ್ಕೆ ಅರ್ಜಿ ಆಹ್ವಾನ


ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ತಾಲೂಕಿನ ವಿಜ್ಞಾನ ಶಿಕ್ಷಕರ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಪ್ರಮುಖ ಉಪನ್ಯಾಸ ನೀಡುತ್ತಿದ್ದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯರ ಸಾಧನೆ ಹಾಗೂ ಸವಾಲುಗಳ ಕುರಿತು ಮಾತನಾಡಿ ನಂತರ ವಿದ್ಯಾರ್ಥಿ ಹಾಗೂ ವಿಜ್ಞಾನ ಶಿಕ್ಷಕರೊಡನೆ ಮುಕ್ತವಾಗಿ ಸಂವಾದಿಸಿದರು. ನಿರರ್ಗಳವಾಗಿ ನಾಲ್ಕು ತಾಸುಗಳ ವರೆಗೆ ರಾಕೆಟ್, ಉಪಗ್ರಹ ಉಡಾವಣೆಯ ಇತಿಹಾಸ ಹಾಗೂ ಮುಂಬರುವ ಹೊಸ ಯೋಜನೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ವಿಜ್ಞಾನ ಸಂಘದ ಅಧ್ಯಕ್ಷ ಎನ್.ಆರ್.ಗಜು, ಸಂಘದಡಿ ಹಮ್ಮಿಕೊಂಡ ಅಂತರಿಕ್ಷ ವಿಜ್ಞಾನದ ಪಠ್ಯಪೂರಕ ಜಟಿಲ ಪಠ್ಯಕ್ಕೆ ಸ್ವತಃ ವಿಜ್ಞಾನಿಗಳಿಂದ ಉತ್ತರ ಪಡೆವ ಭಾಗ್ಯ ತಾಲೂಕಿನ ವಿಜ್ಞಾನ ಶಿಕ್ಷಕರಿಗೆ ಲಭಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.

RELATED ARTICLES  ಶ್ರೀ ಶಿವಾನಂದ ಹೆಗಡೆ ಇವರಿಗೆ "ಶ್ರೇಷ್ಠ ಸಾಧಕ"ಪ್ರಶಸ್ತಿ


ಈ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಕರ ಸಂಘ ಹಾಗೂ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಕಸ್ತೂರಬಾ ಇಕೋ ಕ್ಲಬ್ ಪರವಾಗಿ ವಿಜ್ಞಾನಿ ಪಿ.ಜೆ.ಭಟ್ಟ ಹಾಗೂ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯ ವಿಜ್ಞಾನ ಶಿಕ್ಷಕ ಮಹಾದೇವ ಗೌಡ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಪಿ.ಎನ್.ನಾಯ್ಕ, ವಿಜ್ಞಾನ ಸಂಘದ ಕಾರ್ಯದರ್ಶಿ ಎಸ್.ಎಸ್.ಪೈ ಉಪಸ್ಥಿತರಿದ್ದರು.


ಪ್ರಾರಂಭದಲ್ಲಿ ಕುಮಾರಿ ಪ್ರಜ್ಞಾ ಆಚಾರಿ ಪ್ರಾರ್ಥಿಸಿದರು. ವಿಜ್ಞಾನ ಸಂಘದ ಸಹಕಾರ್ಯದರ್ಶಿ ಕಿರಣ ಪ್ರಭು ಸ್ವಾಗತಿಸಿದರು. ಮಾಧ್ಯಮಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಅನಿಲ್ ರೊಡ್ರಿಗಸ್ ಪರಿಚಯಿಸಿದರು. ತಾಲೂಕಿನ ಬಹುತೇಕ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರು ವಿಜ್ಞಾನಿಗೊಡನೆ ತಮ್ಮ ಪಾಠಕ್ಕೆ ಪೂರಕ ವಿವರಣೆ ಪಡೆದುಕೊಂಡಿದ್ದು ಧನ್ಯತಾಭಾವ ಪ್ರಕಟಿಸಿದರು.