ಭಟ್ಕಳ- ಪಾರದರ್ಶಕತೆ ಉತ್ತರ ದಾಯಿತ್ವ ಸಾಧ್ಯವಾಗಿರುವ ಯೋಜನೆ ಎಂದರೆ ಅದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮಾತ್ರ. ಹಾಗಾಗಿ ನಿಯಮ ಪಾಲಿಸಿದಲ್ಲಿ ಅತಿ ಹೆಚ್ಚು ಗ್ರಾಮೀಣ ಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯ ಎಂದು ತಾಲೂಕು ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ಹೇಳಿದರು. ಅವರು ಸೋಮವಾರ ತಾಲೂಕಿನ ಬೇಂಗ್ರೆ ಪಂಚಾಯತ್ ಸಭಾ ಭವನದಲ್ಲಿ ನಡೆದ 2019-20 ನೇ ಸಾಲಿನ ಎರಡನೇ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕನಿಷ್ಠ ಕೂಲಿಗೂ ಪರದಾಡುವಂತಹ ಅನೇಕ ಬಡ ಕುಟುಂಬ ಪ್ರತಿ ಊರಲ್ಲೂ ಇದ್ದೆ ಇರುವುದರಿಂದ ಅಂತಹ ಬಡಜನರನ್ನು ಯೋಜನೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಅಗತ್ಯತೆ ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಂಡಳ್ಳಿಯವರು ತಿಳಿಸಿದರು. ಜೊತೆಗೆ ಯೋಜನೆಯಲ್ಲಿ ಬರಬಹುದಾದ ಎಲ್ಲ ಕಾಮಗಾರಿಗಳ ಪರಿಚಯ ಮತ್ತು ಒದಗಿಸಬೇಕಾದ ದಾಖಲುಗಳ ಬಗ್ಗೆ ಸಭೆಯಲ್ಲಿ ಅವರು ತಿಳಿಸಿ ಹೇಳಿ, ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಗ್ರಾಮ ಸಭೆ ಅಧ್ಯಕ್ಷತೆ ವಹಿಸಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ನಾಯ್ಕ ಮಾತನಾಡಿ ನರೇಗದಲ್ಲಿ ಸಿಗುವಷ್ಟು ಗರಿಷ್ಠ ಸೌಲಭ್ಯ ಬೇರೆ ಯಾವ ಯೋಜನೆ ಯಲ್ಲಿಯೂ ಸಿಗದ ಕಾರಣ ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು. ಸಾಮಾಜಿಕ ಪರಿಶೋಧಕರು ಈ ದಿಸೆಯಲ್ಲಿ ಮಹತ್ವಪೂರ್ಣ ಕಾರ್ಯ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಭಿವೃದ್ಧಿ ಅಧಿಕಾರಿ ಉದಯ ಬೋರ್ಕರ್ ಸ್ವಾಗತಿಸಿ ಪ್ರಸ್ತುತ ಅವದಿಯಲ್ಲಿ ಮಾಡಲಾದ ಕಾಮಗಾರಿಗಳನ್ನು ಓದಿದರು. ಪಂಚಾಯತ ಸಿಬ್ಬಂದಿ ಈ ಹಿಂದಿನ ಸಭಾ ನಡಾವಳಿ ಓದಿದರು. ಪಂಚಾಯತ್ ಅಧ್ಯಕ್ಷ ವೆಂಕ್ಟಯ್ಯ ಬೈರುಮನೆ ಗ್ರಾಮಸಭೆ ವೇದಿಯಲ್ಲಿ ಹಾಜರಿದ್ದರು.ಕಾರ್ಯದರ್ಶಿ ಎಮ್.ಎ.ಗೌಡ ವಂದಿಸಿದರು.