ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸಮೂಹ ಸಂಸ್ಥೆಗಳಿಂದ “ಸರಸ್ವತಿ ಸಂಭ್ರಮ” ವಾರ್ಷಿಕ ಸ್ನೇಹ ಸಮ್ಮಿಲನ ನಡೆಯಿತು.
ನಿವೃತ್ತ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಎನ್.ಟಿ.ಪ್ರಮೋದರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕತೆಯನ್ನು ಸದುಪಯೋಗಪಡಿಸಿಕೊಂಡು ಉನ್ನತ ಸ್ಥಾನಕ್ಕೆ ಬೆಳೆಯಲು ಆಧುನಿಕತೆ ಪೂರಕ ಪ್ರೇರಕವಾಗಲಿ ಎಂದು ಆಶಿಸಿ ಸಂಸ್ಥೆ ಬೆಳೆದು ಹೆಮ್ಮರವಾಗಿ ಇಂದು ರಾಜ್ಯದಲ್ಲೇ ಗುರುತಿಸಿಕೊಂಡ ಕೊಂಕಣ ಸಂಸ್ಥೆಯ ಕುರಿತು ಪ್ರಶಂಸನೀಯ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾದ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷರಾದ ಎಲ್.ಎಂ.ಹೆಗಡೆ ಮುಖ್ಯಾಧ್ಯಾಪಕರು ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಮಾತನಾಡಿ, ಸ್ವಾತಿ ಮುತ್ತುಗಳನ್ನು ಸಮಾಜಕ್ಕೆ ನೀಡುವ ಕಾರ್ಯ ಕೊಂಕಣ ಸಂಸ್ಥೆ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಮಾನಸಿಕ, ದೈಹಿಕ ಚಟುವಟಿಕೆಗಳು ಅತ್ಯಗತ್ಯ. ಅಂದಾಗ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ವಿಠ್ಠಲ ನಾಯಕ ಮಾತನಾಡಿ, 2019 ನಮ್ಮ ಸಂಸ್ಥೆಯ ಇತಿಹಾಸದಲ್ಲಿ ಮರೆಯಬಾರದ ವರ್ಷವಾಗಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಪ್ರಥಮ, ದ್ವಿತೀಯ ರ್ಯಾಂಕ್‍ಗಳನ್ನು ಒಳಗೊಂಡಂತೆ ಮೊದಲ 10 ಸ್ಥಾನದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸಿಂಹಪಾಲನ್ನು ಹೊಂದಿರುವುದು ನಮಗೆಲ್ಲಾ ಅತೀವ ಆನಂದವನ್ನು ಉಂಟುಮಾಡಿದೆ. ಅಂತೆಯೇ, ದ್ವಿತೀಯ ಪಿ.ಯು.ಸಿಯಲ್ಲಿಯೂ ನಮ್ಮ ಸಂಸ್ಥೆಯ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿರುತ್ತಾರೆ. ಪಠ್ಯವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಇಪ್ಪತ್ತಾರು ವರ್ಷಗಳ ಸಂಸ್ಥೆಯ ಸೇವೆಗೆ ಸಹಕರಿಸಿದ ಸರ್ವರನ್ನೂ ಅಭಿನಂದಿಸಿ, ಮುಂದೆಯೂ ಕೂಡ ಇದೇ ರೀತಿಯ ಸಹಕಾರ ಆಶಿಸಿದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿರುವ ಸಂಸ್ಥೆಯ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.
ವೇದಿಕೆಯಲ್ಲಿ ಟ್ರಸ್ಟಿಗಳಾದ ರಮೇಶ ಪ್ರಭು, ಅಶೋಕ ಪ್ರಭು, ಹಿಂದಿನ ಮುಖ್ಯಾಧ್ಯಾಪಕರಾದ ಎಂ.ಎಂ.ಹೆಗಡೆ, ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ, ಪ್ರಾಚಾರ್ಯೆ ಡಾ.ಸುಲೋಚನಾ ರಾವ್, ಮುಖ್ಯಾಧ್ಯಾಪಕಿಯರಾದ ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ, ವಿನಯಾ ನಾಯಕ, ಹಾಗೂ ಮಾತೃಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕ ಶಿವಾನಂದ ಭಟ್ಟ ಸ್ವಾಗತಿಸಿ ಪರಿಚಯಿಸಿದರೆ, ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಮುರಲೀಧರ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಸುಲೋಚನಾ ರಾವ್ ವಂದಿಸಿದರು. ಶಿಕ್ಷಕರುಗಳಾದ ಪ್ರಕಾಶ ಗಾವಡಿ, ಗೌರೀಶ ಭಂಡಾರಿ, ಅಮಿತಾ ಗೋವೇಕರ್ ಕಾರ್ಯಕ್ರಮವನ್ನು ನಿರೂಪಿಸಿದರು.