`ಪೌರಕಾರ್ಮಿಕರು ಪ್ರತಿನಿತ್ಯ ಸ್ವಚ್ಛತೆಯನ್ನು ಕಾಪಾಡುವ ಧೂತರು. ಅವರು ತಮ್ಮ ಆರೋಗ್ಯ ಕಾಳಜಿಯ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.
ಪಟ್ಟಣದ ರೋಟರಿ ಕ್ಲಬ್ ಸಭಾಭವನದಲ್ಲಿ ನಡೆದ ಹಸಿಕಸ ಮತ್ತು ಒಣಕಸ ವಿಂಗಡಣೆ ಮಾಡಿ ವಿಲೇವಾರಿ ಮಾಡುವ ಕುರಿತು ಕುಮಟಾ ಪುರಸಭೆ, ಭಟ್ಕಳದ ಜಾಲಿ ಪ.ಪಂ ಹಾಗೂ ಹೊನ್ನಾವರ ಪ.ಪಂ ಪೌರಕಾರ್ಮಿಕರಿಗೆ ಚಾಲಕರಿಗೆ ಹಾಗೂ ಮೇಲ್ವಿಚಾರಕರುಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ತರಬೇತಿಯ ಮುಖ್ಯ ಉದ್ದೇಶವೆಂದರೆ ಬಹಳಷ್ಟು ಪೌರ ಕಾರ್ಮಿಕರಿಗೆ ತಮ್ಮ ಹಕ್ಕು ತಿಳಿದಿಲ್ಲ. ಅದನ್ನು ಸರಿಪಡಿಸುವ ಪ್ರಯತ್ನ ಇದಾಗಿದೆ. ಜೊತೆಯಲ್ಲಿ ಪೌರಕಾರ್ಮಿಕರ ಆರೋಗ್ಯ ಕಾಯ್ದುಕೊಳ್ಳುವ ಉದೇಶವಾಗಿದೆ. ಪೌರಕಾರ್ಮಿಕರಿಗೆ ನೀಡಿದ ರಕ್ಷಾ ಕವಚಗಳನ್ನು ತಪ್ಪದೇ ಬಳಸಬೇಕು. ಮೆನ್ಯುಲ್ ಇಳಿದು ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸಕ್ಕೆ ನೇಮಿಸಿದವರಿಗೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಇದು ಪೌರ ಕಾರ್ಮಿಕರ ಆರೋಗ್ಯ ದೃಷ್ಠಿಯಿಂದ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪೌರಕಾರ್ಮಿಕರ ಜೀವ ರಕ್ಷಣೆಗಾಗಿ ರಕ್ಷಾಕವಚಗಳನ್ನು ಹಾಕಿಕೊಳ್ಳಬೇಕು. ಜಿಲ್ಲೆಯಲ್ಲಿ ಮನೆ-ಮನೆಗಳ ಒಣ ಕಸ ಮತ್ತು ಹಸಿ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಿ ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುವ ಪ್ರಯತ್ನ ಜಿಲ್ಲೆಯಲ್ಲಿ ಮಾಡಲಾಗುತ್ತಿದೆ. `ಕಸದಿಂದ ರಸ’ ಎನ್ನುವ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು. ಪೌರಕಾರ್ಮಿಕರು ಪ್ರತಿನಿತ್ಯ ಕಸ ಸಂಗ್ರಹ ಮಾಡುವಾಗ ಜೀವ ರಕ್ಷಣೆ ಕವಚವನ್ನು ಧರಿಸಬೇಕು. ಹಸಿಕಸ ಮತ್ತು ಒಣಕಸ ಎಲ್ಲಿ ಸಂಗ್ರಹವಾಗುತ್ತದೆಯೋ ಅವರು ಅವುಗಳನ್ನು ವಿಂಗಡಣೆ ಮಾಡಿ ಪೌರಕಾರ್ಮಿಕರಿಗೆ ನೀಡುವುದು ಅವರ ಜವಾಬ್ದಾರಿಯಾಗಿದೆ. ಪಟ್ಟಣ ಪಂಚಾಯಿತಿ, ಪುರಸಭೆ, ಜನಪ್ರತಿನಿಧಿಗಳು ಸಹಕಾರ ನೀಡಬೇಕು. ಇದರಲ್ಲಿ ಸಣ್ಣ-ಪುಟ್ಟ ತೊಂದರೆಗಳಾಗುವುದು ಸಹಜ. ಮೊಬೈಲ್, ವಾಟ್ಸಪ್ ಬಳಸುವ ಸಾರ್ವಜನಿಕರಿಗೆ ಕಸದ ಬುಟ್ಟಿ ಬಳಸುವುದು ತೊಂದರೆಯಾಗುವುದಿಲ್ಲ. ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಪೂರ್ಣವಾಗಿ ಆಲೋಚಿಸಬೇಕು. ತರಬೇತಿ ಪಡೆದ ಪೌರಕಾರ್ಮಿಕರು ಎಲ್ಲಾ ವಾರ್ಡುಗಳಲ್ಲಿ ಕಸ ವಿಂಗಡಣೆ ಮಾಡಿ ಪಡೆದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ ಎಂದರು.
ಪೌರಕಾರ್ಮಿಕ ಜಿಲ್ಲಾ ಅಭಿಯಂತರ ಆರ್.ಪಿ.ನಾಯ್ಕ ಪೌರಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ವಿವರಿಸಿದರು.
ಸಿರ್ಸಿ ಪುರಸಭೆಯಿಂದ ಸಿಂಗಾಪುರಕ್ಕೆ ಪ್ರವಾಸಕ್ಕೆ ತೆರಳಿದ ನಾಲ್ಕು ಪೌರಕಾರ್ಮಿಕರು ಅಲ್ಲಿಯ ಕಸ ವಿಲೇವಾರಿ ಮತ್ತು ಸ್ವಚ್ಛತೆಯ ಬಗ್ಗೆ ತಾವು ಕಂಡ ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು.
ಪ.ಪಂ ಅಧ್ಯಕ್ಷೆ ಜೈನಾಭಿ ಸಾಬ್, ತಹಸೀಲ್ದಾರ್ ವಿ.ಆರ್.ಗೌಡ, ಪ.ಪಂ ಮುಖ್ಯಾಧಿಕಾರಿ ಆರ್.ಎಂ.ಪಾಟೇಲ್, ಸ್ಥಾಯಿ ಸಮಿತಿ ಅಧ್ಯಕ್ಷ ನೀಲಕಂಠ ನಾಯ್ಕ, ಪ.ಪಂ ಸದಸ್ಯರಾದ ಸುರೇಶ ಮೇಸ್ತ, ಸುರೇಶ ಶೇಟ್, ತಾರಾ ಕುಮಾರಸ್ವಾಮಿ, ಎ.ಜಿ.ನಾಯ್ಕ, ನಾಗೇಶ ಮೇಸ್ತ ಇತರರು ಇದ್ದರು.
ಪ್ರೊ.ಪ್ರಶಾಂತ ಮೂಡಲಮನೆ ಪ್ರಾಸ್ತಾವಿಕ ಮಾತನಾಡಿದರು. ಸುಧೀಶ ನಾಯ್ಕ ನಿರೂಪಿಸಿದರು