ಕುಮಟಾ: ಶರಾವತಿ ಅಭಯಾರಣ್ಯಕ್ಕೆ ಕುಮಟಾ ತಾಲೂಕಿನ ಕೆಲವು ಗ್ರಾಮಗಳನ್ನು ಸೇರ್ಪಡೆಗೊಳಿಸಿ ಅಂತಿಮ ಆದೇಶವಾಗಿರುವ ಹಿನ್ನೆಲೆಯಲ್ಲಿ ‘ಅಭಯಾರಣ್ಯ-ಚಿಂತನ ಕೂಟ’ವನ್ನು ಜ.೧೯ ರವಿವಾರ ಮುಂಜಾನೆ ೧೦.೦೦ ಗಂಟೆಗೆ ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಮದ ಮಾಸ್ತಿಮನೆ ಆವರಣದಲ್ಲಿ ಸಂಘಟಿಸಲಾಗಿದೆ ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಕುಮಟಾದಲ್ಲಿ ಜ.೨೩ ರಂದು ಸಂಘಟಿಸಲಾದ ಅಭಯಾರಣ್ಯ ವಿರೋಧಿ ರ್‍ಯಾಲಿಯ ಪೂರ್ವಭಾವಿ ಸಭೆಯಾಗಿದ್ದು ಅಧ್ಯಕ್ಷತೆಯನ್ನು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ವಹಿಸಲಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ ತಿಳಿಸಿದ್ದಾರೆ.
ಕತಗಾಲದಲ್ಲಿ ೩ ಗಂಟೆಗೆ ಸಭೆ:
ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಅಳಕೋಡ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಜ. ೧೯ ರಂದು ಮಧ್ಯಾನ್ಹ ೩.೦೦ ಗಂಟೆಗೆ ಕರೆಯಲಾಗಿದೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ಕಾನೂನಿನಲ್ಲಿ ಉಲ್ಲೇಖಿಸಿದಂತೆ ಕ್ಲೇಮಿನ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಗಳನ್ನು ಒತ್ತಾಯಿಸದೇ ಮಂಜೂರಿ ಪ್ರಕ್ರಿಯೆ ಜರುಗಿಸಬೇಕೆಂದು ಜ. ೨೩ ರಂದು ಕುಮಟಾದಲ್ಲಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸುವ ಕುರಿತು ಚರ್ಚಿಸಿ ಅರಣ್ಯ ಅತಿಕ್ರಮಣದಾರರ ಮೇಲೆ ಅರಣ್ಯಾಧಿಕಾರಿಗಳಿಂದ ಉಂಟಾಗುತ್ತಿರುವ ದೌರ್ಜನ್ಯದ ಬಗ್ಗೆ ಮುಂದಿನ ನಡೆಯ ಕುರಿತು ತೀರ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.