ಕುಮಟಾ: ಸರಕಾರ ಇಂದು ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ನಿತ್ಯವೂ ಬಿಸಿಹಾಲು ನೀಡುವ ವ್ಯವಸ್ಥೆ ಮಾಡುತ್ತಿದ್ದು, ಬೆಳೆಯುವ ಮಕ್ಕಳಿಗೆ ಹಾಲು ಸರ್ವಶ್ರೇಷ್ಠವಾದುದು ಹಾಗೂ ಎಲ್ಲ ಮಕ್ಕಳೂ ಬಿಸಿಯೂಟ ಸೇವಿಸುವುದು ಮತ್ತು ಹಾಲು ಕುಡಿಯುವುದು ಆರೋಗ್ಯವರ್ಧಕ ಎಂದು ಅಕ್ಷರದಾಸೋಹದ ಜಿಲ್ಲಾ ನಿರ್ದೇಶಕಿ ಶ್ಯಾಮಲಾ ನಾಯಕ ಸೂಚಿಸಿದರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಅಕ್ಷರ ದಾಸೋಹದ ವ್ಯವಸ್ಥೆಯನ್ನು ಪರಿಶೀಲಿಸಲು ಆಗಮಿಸಿದ ಸಂದರ್ಭದಲ್ಲಿ ಹಾಲು ಸೇವಿಸಲು ಹಿಂದೇಟು ಹಾಕುತ್ತಿರುವ ಕೆಲ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಗೆ ನೂತನ ಅಡುಗೆ ಕೋಣೆ ಮಂಜೂರಿಸಲು ಪ್ರಯತ್ನಿಸುವುದಾಗಿ ತಿಳಿಸಿದರಲ್ಲದೇ, ಸದ್ಯ ಕೆರೆಯಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಮುಳುಗಿ ಮೃತ ಪಟ್ಟ ವಿದ್ಯಾರ್ಥಿ ಆದಿತ್ಯ ಅಂಬಿಗಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು, ತಾಲೂಕಾ ಸಹಾಯಕ ಅಕ್ಷರ ದಾಸೋಹದ ನಿರ್ದೇಶಕ ದೇವರಾಯ ನಾಯಕ, ಬಿಆರ್‍ಪಿ ಮಂಜುನಾಥ ಕೋಡಿಯಾ ಉಪಸ್ಥಿತರಿದ್ದರು. ಶಿಕ್ಷಕ ಅನಿಲ್ ರೊಡ್ರಗೀಸ್ ಸ್ವಾಗತಿಸಿದರು. ಶಿಕ್ಷಕ ವಿಷ್ಣು ಭಟ್ಟ ವಂದಿಸಿದರು.