ಹೊನ್ನಾವರ: ‘ಕಲಾಸಿರಿ ರಂಗಭೂಮಿ ಸಾಂಸ್ಕೃತಿಕ ಜನಪದ ಹಾಗೂ ಕ್ರೀಡಾವೇದಿಕೆ ವತಿಯಿಂದ ಜಿಲ್ಲಾಮಟ್ಟದ ಆಹ್ವಾನಿತ ಸಾಮಾಜಿಕ ಸ್ಪರ್ಧಾ ನಾಟಕೋತ್ಸವ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ಇಲ್ಲಿನ ಮೂಡಗಣಪತಿ ಸಭಾಭವನದಲ್ಲಿ ಉತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘಟನೆಯ ಅಧ್ಯಕ್ಷ ಎಂ.ಎನ್.ನಾಯ್ಕ ನೀಲ್ಕೋಡ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನವರಿ 23 ಮತ್ತು 24ರಂದು ಮೂಡಗಣಪತಿ ಸಭಾಭವನದಲ್ಲಿ ಜಿಲ್ಲಾಮಟ್ಟದ 5 ಆಹ್ವಾನಿತ ತಂಡಗಳ ಸಾಮಾಜಿಕ ಸ್ಪರ್ಧಾ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ತಾಲೂಕಿನ ಹವ್ಯಾಸಿ ರಂಗಕಲಾವಿದರು ಒಟ್ಟುಗೂಡಿ ಸಾಂಸ್ಕೃತಿಕ ಉತ್ಸವ ಮಾಡಬೇಕೆನ್ನುವ ಉದ್ದೇಶದಿಂದ ಕಲಾಸಿರಿ ರಂಗಭೂಮಿ ಸಾಂಸ್ಕೃತಿಕ ಹಾಗೂ ಜನಪದ ವೇದಿಕೆ ಎನ್ನುವ ಸಂಘಟನೆಯನ್ನು ಉದ್ಘಾಟನೆ ಮಾಡಲಾಗುವುದು. ಸಂಘಟನೆ ಕೇವಲ ಸಾಂಸ್ಕೃತಿಕ ಉತ್ಸವಕ್ಕೆ ಸಿಮೀತವಾಗಿರದೇ, ನಶಿಸುತ್ತಿರುವ ರಂಗಭೂಮಿ ಕಲೆ ಉಳಿಸಲು ಹಾಗೂ ಕಲಾವಿದರ ಬಳಗದವರಿಗೆ ಶೈಕ್ಷಣಿಕ, ಆರ್ಥಿಕ ಹಾಗೂ ದೈಹಿಕವಾಗಿ ತೊಂದರೆ ಬಂದಲ್ಲಿ ಸ್ಪಂದಿಸಿ ಪರಿಹಾರ ನೀಡುವ ಯೋಜನೆ ಇಟ್ಟುಕೊಂಡಿದ್ದೇವೆ. ಜಾತಿ, ಮತ, ಬೇಧವಿಲ್ಲದೆ ಸಂಘ ಕಟ್ಟಿಕೊಂಡಿದ್ದೇವೆ’ ಎಂದು ತಿಳಿಸಿದರು.