ಬೆಂಗಳೂರು: ಬಡ ಜನರಿಗಾಗಿ ರಾಜ್ಯ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟಿನ್ ನಲ್ಲಿ ಆಹಾರ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದರಿಂದ ಇದಕ್ಕೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ನಾವು ಸದ್ಯ 300 ಮಂದಿಗೆ ಮಾತ್ರ ತಯಾರಿಸುತ್ತಿದ್ದು 500 ಮಂದಿಗೆ ಅಲ್ಲ ಎಂದು ಹೇಳಿದ್ದಾರೆ.
ಸದ್ಯ ನಾವು ಒಂದು ಹೊತ್ತಿಗೆ 300 ಜನರಿಗೆ ಮಾತ್ರ ಆಹಾರ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ 500 ಜನರಿಗಾಗುವಷ್ಟು ಆಹಾರ ತಯಾರಿಸಲಾಗುವುದು. ಪಾಲಿಕೆ ದಾಖಲಾತಿ ಪ್ರಕಾರ ಶುಕ್ರವಾರದ ಮಧ್ಯಾಹ್ನದ ಊಟದ ವೇಳೆಗೆ ಸುಮಾರು 2,52,200 ಮಂದಿ ಆಹಾರ ಸೇವಿಸಿದ್ದಾರೆ ಎಂದು ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಒಬ್ಬ ವ್ಯಕ್ತಿಗೆ ಎಷ್ಟು ಪ್ರಮಾಣದ ತಿಂಡಿ ಊಟ ನೀಡಲಾಗುತ್ತದೆ ಎಂಬ ಬಗ್ಗೆಯಾಗಲಿ ಅಥವಾ ನಿರ್ದಿಷ್ಠ ಪ್ರಮಾಣದ ಸಂಖ್ಯೆಯ ಜನರಿಗೆ ಊಟ ತಿಂಡಿ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಯಾವುದೇ ಕ್ರಮಗಳಿಲ್ಲ ಆದರೆ ಪ್ರತಿ ದಿನ ಮೂರು ಹೊತ್ತಿನಲ್ಲಿ ಪ್ರತಿ ಕ್ಯಾಂಟೀನ್ ನಲ್ಲಿ 900 ಜನರಿಗೆ ಬೆಳಗ್ಗೆ 5 ರುಪಾಯಿಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ತಲಾ 10 ರುಪಾಯಿಗೆ ಊಟ ನೀಡಲಾಗುತ್ತಿದೆ. ಅಂದರೆ ಫಲಾನುಭವಿಯಿಂದ ದಿನವೊಂದಕ್ಕೆ 25 ರುಪಾಯಿ ಪಡೆಯಲಾಗುತ್ತದೆ. ಇದಕ್ಕೆ ಸರ್ಕಾರ 32 ರು. ಅನ್ನು ಗುತ್ತಿಗೆದಾರನಿಗೆ ನೀಡುತ್ತದೆ. ಒಟ್ಟು 57 ರುಪಾಯಿ ಆಗುತ್ತದೆ. ಆದರೆ ಗುತ್ತಿಗೆದಾರ ನಿತ್ಯ 900 ಜನರ ಬದಲು ಆರು ನೂರು, ಏಳು ನೂರು ಜನರಿಗೆ ಮಾತ್ರ ಮೂಟ ನೀಡಿ ಉಳಿದದ್ದು ಸುಳ್ಳು ಲೆಕ್ಕ ತೋರಿಸಲು ಅವಕಾಶವಿದೆ. ಇದರ ಮೇಲೆ ನಿಗಾವಹಿಸುವ ವ್ಯವಸ್ಥೆಯಿಲ್ಲ. ಹೀಗಾಗಿ ಈ ಯೋಜನೆ ಮೂಲಕ ದೊಡ್ಡ ಭ್ರಷ್ಟಾಚಾರ ನಡೆಸಲು ಅವಕಾಶವಿದೆ ಎಂಬ ಆರೋಪವು ಇದೆ.