ಹೊನ್ನಾವರ : ಆಧಾರ ಶಿಕ್ಷಣ, ಸ್ವ ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ) ಸಿದ್ದಾಪುರ ಪ್ರತಿವರ್ಷ ಜಿಲ್ಲಾ ಮಟ್ಟದಲ್ಲಿ ನೀಡುವ ದಿ.ಎಂ.ಟಿ ಕೊಡಿಯಾ ಅವರ ನೆನಪಿನ ‘ಆಧಾರಶ್ರೀ ಪ್ರಶಸ್ತಿ’ಗೆ ಹೊನ್ನಾವರದ ಜೀವನಾಧಾರ ಟ್ರಸ್ಟ್ ನ ಜಾಕಿ ಡಿಸೋಜಾ ಅವರನ್ನು ಆಯ್ಕೆ ಮಾಡಲಾಗಿದೆ. ಫೆಬ್ರವರಿ 10 ರಂದು ನಡೆಯಲಿರುವ ಸಂಸ್ಥೆಯ ‘ಸಂಕಲ್ಪ ದಿನಾಚರಣೆ’ ದಿನದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ದಿ.ಎಂ.ಟಿ ಕೊಡಿಯಾ ಅವರು ಸಿದ್ದಾಪುರ ತಾಲೂಕಿನ ನಿವೃತ್ತ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷರು, ಆಧಾರ ಶಿಕ್ಷಣ, ಸ್ವಯಂ ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರು. ಇವರ ಹೆಸರನ್ನು ಜೀವಂತವಾಗಿಡುವ ಪ್ರಯತ್ನವಾಗಿ ಅವರ ನೆನಪಿನಲ್ಲಿ ಆಧಾರಶ್ರೀ ಪ್ರಶಸ್ತಿಯನ್ನು ಸಂಸ್ಥೆ ಪ್ರತಿವರ್ಷ ಜಿಲ್ಲಾ ಮಟ್ಟದಲ್ಲಿ ನೀಡುತ್ತಿದೆ.
ತಮ್ಮ ಬದುಕಿನ ವಿಶ್ರಾಂತ ಸಮಯವನ್ನು ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಟ್ಟು ಆದರ್ಶಪ್ರಾಯರೆನಿಸಿಕೊಂಡ ಹೊನ್ನಾವರ ತಾಲೂಕಿನ ಸೆಂಟ್ರಲ್ ಕಸ್ಟಮ್ಸ್ ಎಕ್ಸೈಸ್ ಡಿಪಾರ್ಟಮೆಂಟ್‍ನ ಸೂಪರಿಡೆಂಟ್ ಆಗಿ ನಿವೃತ್ತಿ ಹೊಂದಿರುವ ಜಾಕಿ.ಜೆ.ಡಿಸೋಜಾ ಅವರಿಗೆ ಈ ಸಲದ ಪ್ರಶಸ್ತಿ ನೀಡಲಾಗುತ್ತಿದೆ ಎಂದಿದ್ದಾರೆ.