ಗೋಕರ್ಣ: ಅಧಿಕಾರಿಗಳ ಆದೇಶಕ್ಕೆ ಕಿಮ್ಮತ್ತು ನೀಡದೆ ಜಾತ್ರೆ ಪ್ರಾರಂಭವಾದರೂ ಹಚ್ಚೆ ಹಾಕುವ ಅಂಗಡಿಗಳನ್ನು ತೆರೆದಿಟ್ಟ ಕಾರಣಕ್ಕಾಗಿ ಅಧಿಕಾರಿಗಳು ಅಂಗಡಿಗಳಿಗೆ ಬೀಗ ಹಾಕಿದ ಘಟನೆ ವರದಿಯಾಗಿದೆ.
ಜಾತ್ರೆಯ ಸಮಯದಲ್ಲಿ ಹಚ್ಚೆ ಹಾಕುವುದನ್ನು (ಟ್ಯಾಟೂ) ನಿಷೇಧಿಸುವಂತೆ ಜಿಲ್ಲಾಧಿಕಾರಿಗಳ ಆದೇಶವಿದ್ದು, ಅದರಂತೆ ಪುರಾಣ ಪ್ರಸಿದ್ದ ಕ್ಷೇತ್ರದಲ್ಲಿ ಶಿವರಾತ್ರಿ ಮಹೋತ್ಸವದ ನಿಮಿತ್ತ ಇಲ್ಲಿನ ಟ್ಯಾಟೂ ಅಂಗಡಿಯನ್ನು ಬಂದ್ ಮಾಡುವಂತೆ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಆದೇಶಿಸಿ ಠರಾವು ಪಾಸ್ ಮಾಡಿದ್ದರು.
ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಚಿಸಿದರೂ ಟ್ಯಾಟೂ ಹಾಕುವುದನ್ನು ಮುಂದುವರಿಸಿದ್ದ ಕಾರಣಕ್ಕೆ ತಾಲೂಕಾ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಟ್ಯಾಟೂ ಅಂಗಡಿಗಳ ಮೇಲೆ ದಾಳಿ ಮಾಡಿ ಅಂಗಡಿಯನ್ನು ಸೀಜ್ ಮಾಡಿದ್ದಾರೆ. ಮಾನವೀಯತೆಯಿಂದ ಹಲವು ಬಾರಿ ಜಾತ್ರಾ ಸಮಯದಲ್ಲಿ ಮಾತ್ರ ಮುಚ್ಚುವಂತೆ ಸೂಚಿಸಲಾಗಿತ್ತು ಇದು ಜಿಲ್ಲಾಧಿಕಾರಿಗಳ ಆದೇಶವಾಗಿದ್ದು, ಆದರೂ ಆದೇಶ ಉಲ್ಲಂಘನೆ ಮಾಡಿದ ಕಾರಣ ಅನಿವಾರ್ಯವಾಗಿ ಬೀಗ ಹಾಕಲಾಗಿದೆ ಎನ್ನಲಾಗಿದೆ.