ಕಾರವಾರ: ಬೆಂಗಳೂರಿನ ಪ್ರೀಡಂಪಾರ್ಕಿನಲ್ಲಿ ಸಿಎಎ ವಿರುದ್ಧವಾಗಿ ನಡೆದ ಕಾರ್ಯಕ್ರಮದಲ್ಲಿ ಎಡಪಂಥೀಯ ವಿಚಾರಧಾರೆಯಿಂದ ಗುರುತಿಸಿಕೊಂಡಿದ್ದ ಯುವತಿ ಲಿಯೋನಾ ಅಮೂಲ್ಯಾ ವೇದಿಕೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಸಾರ್ವಜನಿಕವಾಗಿ ಘೋಷಣೆ ಕೂಗಿದ್ದಳು. ಸಂಸದ ಅಸಾವುದ್ಧೀನ್ ಓವೈಸಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವತಿ ಈ ದೇಶದ್ರೋಹದ ಘೋಷಣೆ ಕೂಗಿದ್ದಾಳೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಅನಂತ ಕುಮಾರ್ ಹೆಗಡೆ ಎಡಪಂಥೀಯ ವಿಚಾರ ಇತ್ತಿಚೆಗೆ ದೇಶದ್ರೋಹಿಯಾಗಿ ಮಾರ್ಪಟ್ಟಿದೆ. ಜೊತೆಗೆ ಸಿಎಎ ವಿರುದ್ಧದ ಹೋರಾಟ ದೇಶದ್ರೋಹಿ, ಹಿಂದೂ ವಿರೋಧಿಯಾಗಿ ನಡೆಯುತ್ತಿದೆ, ಪಾಕಿಸ್ತಾನ ಜಿಂದಾಬಾದ್ ಎಂದವರ ಮೇಲೆ ಕೂಡಲೇ ದೇಶದ್ರೋಹ ಪ್ರಕರಣ ದಾಖಲಿಸಿ ಎಂದು ಎಂದು ಕಿಡಿ ಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮ ಕರ್ನಾಟಕದ ಪ್ರಜ್ಞಾವಂತ ಜನ ತಲೆ ತಗ್ಗಿಸುವ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ಎಡಪಂಥೀಯ ಎಂದು ಗುರುತಿಸಿಕೊಂಡಿರುವ ಯುವತಿ ಮಾತನಾಡುವಾಗ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು, ಅದಕ್ಕೆ ವೇದಿಕೆಯಲ್ಲಿದ್ದ ಜನ ಹಾಗು ಸಾರ್ವಜನಿಕರು ಸಾಕ್ಷಿಯಾಗಿದ್ದಾರೆ. ಕರ್ನಾಟಕದಂತ ಪುಣ್ಯ ನೆಲದಲ್ಲಿ ಇಂತಹ ದೇಶದ್ರೋಹ ಪ್ರಕರಣ ನಡೆಯಬಾರದು. ರಾಜ್ಯದ ಪ್ರಜ್ಞಾವಂತ ಜನತೆ ಇದಕ್ಕೆ ಸೂಕ್ತ ಉತ್ತರವನ್ನು ನೀಡಬೇಕು. ಇಂತಹ ದೇಶದ್ರೋಹಿ ಚಟುವಟುಕೆಯನ್ನು ಕರ್ನಾಟಕದ ಮಣ್ಣು ಎಂದಿಗೂ ಸಹಿಸದು. ಕೇವಲ ಆ ಯುವತಿಯ ಮೇಲೆ ಮಾತ್ರವಲ್ಲ, ಕಾರ್ಯಕ್ರಮದ ಸಂಘಟಕರ ಮೇಲೂ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.