ಹೊನ್ನಾವರ: ಭಾರತೀಯ ಸಂಸ್ಕೃತಿಯು ಸಾಂಪ್ರದಾಯಿಕ ಕಲೆಗಳಿಂದ ಉಳಿದಿದೆ. ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಾಂಪ್ರದಾಯಿಕ ಕಲೆಗಳಿಗೆ ಸರ್ಕಾರವು ಪೋ›ತ್ಸಾಹ ನೀಡಬೇಕಾಗಿದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಹೇಳಿದರು.
ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಕೆರೆಮನೆ ಶ್ರೀಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ಗುರುವಾರ ಆಯೋಜಿಸಿದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಅವರು ಮಾತನಾಡಿದರು. ಸರ್ಕಾರಗಳು ಭಾರತೀಯ ರಂಗ ಪರಂಪರೆಗೆ ಕೊಡಬೇಕಾದ ಮನ್ನಣೆಯನ್ನು ಕೊಡುತ್ತಿಲ್ಲ. ಈ ಕ್ಷೇತ್ರಕ್ಕೆ ಸರ್ಕಾರ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ. ಯಕ್ಷಗಾನ ಕ್ಷೇತ್ರಕ್ಕೆ ಇನ್ನೂ ಸಾಕಷ್ಟು ಕಲಾವಿದರು ಸೂಕ್ತ ತರಬೇತಿಯೊಂದಿಗೆ ಸೃಷ್ಟಿಯಾಗಬೇಕಿದೆ. ಇದಕ್ಕೆ ಯಕ್ಷಗಾನ ಅಕಾಡೆಮಿ ಪ್ರೋತ್ಸಾಹ ನೀಡುವುದು. ಸಾಂಪ್ರದಾಯಿಕ ಕಲಾ ಪ್ರಕಾರಗಳು ಬೆಳವಣಿಗೆ ಹೊಂದಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಲೇಖಕ ಮೈಸೂರಿನ ಜಿ.ಎಸ್.ಭಟ್ ಬರೆದ ‘ಇಡಗುಂಜಿ ಮೇಳ 85’ ಕೃತಿಯನ್ನು ಬಿಡುಗಡೆಗೊಳಿಸಿದ ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ ಮಾತನಾಡಿ, ಇಂದು ಪರಿಸರದ ಮೇಲೆ ಹಲವು ಬಗೆಯಲ್ಲಿ ದುಷ್ಪರಿಣಾಮ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಿ ಪರಿಸರದ ಸಮತೋಲವನ್ನು ಕಾಪಾಡುವಲ್ಲಿ ಪಶ್ಚಿಮ ಘಟ್ಟಗಳು ಸೇರಿದಂತೆ ಹಲವಾರು ಜಾಗತಿಕ ಜೀವ ವೈವಿಧ್ಯತೆಯ ತಾಣಗಳು ಪ್ರಮುಖ ಪಾತ್ರವಹಿಸುತ್ತಿವೆ. ಅದೇ ರೀತಿಯಲ್ಲಿ ಆಧುನಿಕ ಜೀವನಶೈಲಿಯಿಂದ ಕಳೆದುಕೊಳ್ಳುತ್ತಿರುವ ನೆಮ್ಮದಿಯನ್ನು ಇಂಥಹ ಕಲಾ ವೈಭವದ ಕೇಂದ್ರಗಳು ಮರಳಿ ನೀಡುತ್ತಿದೆ. ಕಲಾಕೇಂದ್ರಗಳು ಸಮಾಜವನ್ನು ಸುಸ್ಥಿತಿಯಲ್ಲಿಡಲು ಮುಖ್ಯ ಪಾತ್ರ ವಹಿಸುತ್ತಿವೆ ಎಂದರು.
ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಹಿರಿಯ ಮದ್ದಲೆವಾದಕ ಮಾವಿನಕೆರೆ ಕೃಷ್ಣ ಯಾಜಿ ಅವರಿಗೆ ನೀಡಿ ಗೌರವಿಸಲಾಯಿತು. ಗೋಪಾಲಕೃಷ್ಣ ಹೆಗಡೆ ಕಲಭಾಗ ಅಭಿನಂದನಾ ನುಡಿದರು. ಅರ್ಥಧಾರಿ ಡಾ. ಪ್ರಭಾಕರ ಜೋಶಿ ಅವರು ಅಗಲಿದ ಚೇತನಗಳನ್ನು ಸ್ಮರಿಸಿದರು.
ಲೇಖಕ ಜಿ.ಎಸ್.ಭಟ್, ಯಕ್ಷರಂಗದ ಗೋಪಾಲಕೃಷ್ಣ ಭಾಗವತ, ಉದ್ಯಮಿ ವೆಂಕಟ್ರಮಣ ಹೆಗಡೆ ಕವಲಕ್ಕಿ ಇತರರಿದ್ದರು. ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿದರು. ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ವಂದಿಸಿದರು.
ಶಕ್ತಿ ಇರುವವರೆಗೂ ಕ್ಷೇತ್ರದಲ್ಲಿರುವೆ: ಯಕ್ಷಗಾನ ಕ್ಷೇತ್ರಕ್ಕೆ ಚಂಡೆ ಮತ್ತು ಮದ್ದಲೆವಾದಕನಾಗಿ ಬಂದ ನಾನು ಅವಿಸ್ಮರಣೀಯ ಅನುಭವವನ್ನು ಪಡೆದೆ. ನನ್ನ ಕಿವಿ ಮತ್ತು ಕೈಗೆ ಶಕ್ತಿ ಇರುವವರೆಗೂ ಈ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ ಎಂದು ಹಿರಿಯ ಮದ್ದಲೆ ವಾದಕ ಮಾವಿನಕೆರೆ ಕೃಷ್ಣ ಯಾಜಿ ಹೇಳಿದರು. ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಯಕ್ಷಗಾನ ಕ್ಷೇತ್ರಕ್ಕೆ ಮದ್ದಲೆವಾದಕನಾಗಿ ಬಂದ ನನಗೆ ಹಲವರು ಗುರುಗಳಾಗಿ ಮಾರ್ಗದರ್ಶನ ಮಾಡಿದ್ದಾರೆ. ಇಂಡಗುಂಜಿ ಮೇಳದಿಂದ ನನಗೆ ಗೌರವ ದೊರೆತಿದೆ. ಹಲವು ಕಲಾವಿದರು, ಗಣ್ಯರ ಸಂಪರ್ಕದೊಂದಿಗೆ ಪ್ರಶಸ್ತಿ ಸ್ವೀಕರಿಸಿದ ತೃಪ್ತಿಯಿದೆ ಎಂದರು.