ಕುಮಟಾ: ಪಟ್ಟಣದ ದೇವರಹಕ್ಕಲಿನ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ನಡೆದ ಭರತನಾಟ್ಯ ರಂಗಪ್ರವೇಶದಲ್ಲಿ ನೃತ್ಯಸ್ವರ ಕಲಾಕೇಂದ್ರದ ನೃತ್ಯಗುರು ವಿಜೇತಾ ಭಂಡಾರಿಯವರ ಶಿಷ್ಯೆಯರಾದ ಐವರು ಕಲಾವಿದರು ತನ್ನ ಪ್ರಬುದ್ಧ ಮತ್ತು ಸಂಪೂರ್ಣ ಹಿಡಿತದ ಭರತನಾಟ್ಯ ಹೆಜ್ಜೆಗಳ ಮೂಲಕ ನೆರೆದಿದ್ದ ಕಲಾಸಕ್ತರ ಪ್ರಶಂಸೆಗೆ ಪಾತ್ರರಾದರು.

ಗುರುವಿನ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸವನ್ನು ಮಾಡಿದ್ದ ದಿವ್ಯಜ್ಯೋತಿ ನಾಯ್ಕ, ಕೀರ್ತಿ ಭಂಡಾರಿ, ಮಧುರಾ ಪಟಗಾರ, ವೈಭವಿ ಭಂಡಾರಿ ಹಾಗೂ ನವ್ಯಾ ಶಿರೋಡ್ಕರ್ ಗುರುವಿನಿಂದ ಗೆಜ್ಜೆ ಕಟ್ಟಿಸಿಕೊಂಡು, ಪುಷ್ಪಾಂಜಲಿಯೊಂದಿಗೆ ತಮ್ಮ ರಂಗಪ್ರವೇಶದ ಪ್ರಸ್ತುತಿಯನ್ನು ಆರಂಭಿಸಿದರು. ವಿದ್ವಾನ್ ರಮೇಶ ಚಡಗ ಬೆಂಗಳೂರು ಸಂಯೋಜನೆಯ ನೃತ್ಯದ ನಂತರ ರಾಗಮಾಲಿಕೆಯಲ್ಲಿ ದೇವರಸ್ತುತಿ, ಗಣೇಶ ಸ್ತುತಿ, ಅಲರಿಪು, ಜತಿಸ್ವರ, ವರ್ಣಂ, ದೇವಿಸ್ತುತಿ, ಗುರುಸ್ತುತಿ, ಶಿವಸ್ತುತಿ, ಭಜನ್, ದೇವರ ನಾಮ ಹಾಗೂ ತಿಲ್ಲಾನ ಪ್ರಸ್ತುತಪಡಿಸಿ ನೆರೆದಿದ್ದ ಪ್ರೇಕ್ಷಕರೆದುರು ತಮ್ಮ ನೃತ್ಯ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಹಿಮ್ಮೇಳದ ನಟುವಾಂಗದಲ್ಲಿ ನೃತ್ಯ ಗುರು ವಿಜೇತಾ ಭಂಡಾರಿ, ಹಾಡುಗಾರಿಕೆಯಲ್ಲಿ ವಿದ್ವಾನ್ ರಮೇಶ ಚಡಗ ಬೆಂಗಳೂರು, ಪದ್ಮರಾಜ ಭಟ್ಟ ಕೇರಳ ಮೃದಂಗದಲ್ಲಿ, ರಾಹುಲ್ ಕಣ್ಣೂರ ಕೇರಳ ಕೊಳಲು ವಾದನದಲ್ಲಿ ಹಾಗೂ ರಿದಂ ಪ್ಯಾಡ್‍ನಲ್ಲಿ ರಾಘವೇಂದ್ರ ರಂಗಧೋಳ ಶಿವಮೊಗ್ಗ ಮತ್ತು ರೇಷ್ಮಾ ಭಂಡಾರಿ ವಸ್ತ್ರಾಲಂಕಾರದಲ್ಲಿ ಸಹಕರಿಸಿದ್ದರು.

RELATED ARTICLES  ಶೌಚಾಲಯಕ್ಕೆ ಹೋದ ಮಹಿಳೆಯ ವಿಡಿಯೋ ಮಾಡಲು ಯತ್ನ: ಕುಮಟಾ ಹೊಸ ಬಸ್ ನಿಲ್ದಾಣದ ಬಳಿ ಘಟನೆ..!

ಸಭಾ ಕಾರ್ಯಕ್ರಮವನ್ನು ಕ.ಸಾ.ಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಉದ್ಘಾಟಿಸಿ, ಮಾತನಾಡಿ, ಭಾರತದ ನೆಲೆಗಟ್ಟು ಗುರುಪರಂಪರೆಯ ಮೇಲೆ ನಿಂತಿದ್ದು, ನೃತ್ಯ ಸಂಸ್ಕೃತಿಯು ಸಂಗೀತ ಹಾಗೂ ಸಾಹಿತ್ಯದ ಸಂಕೇತವಾಗಿದೆ. ಬೇರೆ ಬೇರೆ ವಿಭಾಗದಲ್ಲಿ ಅಧ್ಯಯನ ಹಾಗೂ ಉದ್ಯೋಗ ಮಾಡುತ್ತಿರುವ ಪ್ರತಿಭೆಗಳ ಭರತನಾಟ್ಯ ರಂಗ ಪ್ರವೇಶ ನಮ್ಮ ನೆಲದ ಸತ್ವವಾಗಿದ್ದು, ಶಿವರಾತ್ರಿಯ ಸಂದರ್ಭದಲ್ಲಿ ನಟರಾಜನ ಪೂಜೆ ಮಾಡುತ್ತಿರುವ ವಿಜೇತಾ ಭಂಡಾರಿ ಹಾಗೂ ಅವರ ಶಿಷ್ಯಂದಿರರು ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ರಂಗದ ಮೈಲುಗಲ್ಲಾಗಿ ನಿಲ್ಲುತ್ತಾರೆ ಎಂದು ಶುಭ ಹಾರೈಸಿದರು.

ಹೊನ್ನಾವರದ ಮಾರ್ಥೋಮಾ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಎಚ್.ಎನ್.ಪೈ ಮಾತನಾಡಿ, ಭರತನಾಟ್ಯ ದಕ್ಷಿಣ ಭಾರತದ ಪ್ರಮುಖ ಕಲೆಯಾಗಿದ್ದು, ಭರತನಾಟ್ಯ ಕಲೆಯು ತಮಿಳುನಾಡಿನ ತಂಜಾವುರದಲ್ಲಿ ಉಗಮವಾಗಿದೆ. ಯಕ್ಷಗಾನ ಕಲೆಯಲ್ಲಿ ನೃತ್ಯದ ಜೊತೆಗೆ ಸಾಹಿತ್ಯ ಅಭಿವ್ಯಕ್ತಿಪಡಿಸಲು ಅವಕಾಶವಿದೆ. ಆದರೆ ಭರತನಾಟ್ಯದಲ್ಲಿ ಹಾವ ಮತ್ತು ಭಾವ ಮಾತ್ರ ಪ್ರಸ್ತುತಪಡಿಸಬಹುದು ಎಂದ ಅವರು, ಈ ಐವರು ವಿದ್ಯಾರ್ಥಿಗಳು ಪ್ರಚುರಪಡಿಸಿದ ಭರತನಾಟ್ಯ ಜನಮನಗಳಿಸಿದೆ ಎಂದರು.

RELATED ARTICLES  ತಂಬಾಕು ಬೇಡ’ ವಿಡಿಯೋ ನೋಡಿ ಮರುಗಿದ ಮಕ್ಕಳು

ಈ ಸಂದರ್ಭದಲ್ಲಿ ನೃತ್ಯಗುರು ವಿಜೇತಾ ಭಂಡಾರಿಯವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಗಿಬ್ ಬಾಲಕಿಯರ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕಿ ಜ್ಞಾನದಾ ಶಾನಭಾಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಕೆ.ಬಿ.ಪೈ, ನೃತ್ಯಸ್ವರ ಕಲಾ ಟ್ರಸ್ಟ್ ಅಧ್ಯಕ್ಷ ರಮೇಶ ಭಂಡಾರಿ, ಕಾರ್ಯದರ್ಶಿ ಸೋಮಶೇಖರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವರ ಭಂಡಾರಿ ಪ್ರಾರ್ಥಿಸಿದರು. ಶಿಕ್ಷಕಿ ನಿರ್ಮಲಾ ಪ್ರಭು ನಿರೂಪಿಸಿದರು. ಪಾಲಕರಾದ ಲಕ್ಷ್ಮಣ ನಾಯ್ಕ, ಗಣೇಶ ಭಂಡಾರಿ, ಗಂಗಾಧರ ಪಟಗಾರ, ಪ್ರಭಾಕರ ಭಂಡಾರಿ, ನಾಗರಾಜ ಶಿರೋಡ್ಕರ ಮತ್ತಿತರರು ಇದ್ದರು. ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮಕ್ಕೆ ಸುಮಾರು 500 ಕ್ಕೂ ಅಧಿಕ ಪ್ರೇಕ್ಷಕರು ಸಾಕ್ಷಿಯಾದರು.