ಕುಮಟಾ: ಸಮಾನ ಮನಸ್ಕ ಸಾಹಿತ್ಯಾಭಿಮಾನಿಗಳಿಗೆ ನಿರಂತರವಾಗಿ ನಿಯಮಿತವಾಗಿ ಸಮಾಲೋಚಿಸುವ ಉದ್ದೇಶದಿಂದ ಹುಟ್ಟಿಕೊಂಡ ಸ್ವಯಂ ಸೇವಾ ವೇದಿಕೆ “ಕಾವ್ಯ ಸಂಚಲನ “ದ ಎರಡನೇ ಕಾರ್ಯಕ್ರಮ “ಬೇಂದ್ರೆ ನೆನಪು” ಹೆರವಟ್ಟಾ ದ ಶ್ರೀ ರಾಘವೇಂದ್ರ ಮಠದಲ್ಲಿ ಸುಸಂಪನ್ನವಾಯ್ತು.

ಇಳಿಹೊತ್ತು ಸಂಜೆ ನಾಲ್ಕು ಗಂಟೆಗೆ ಪ್ರಾರಂಭವಾದ ಈ
ಸಾಹಿತ್ಯ ಸಮಾಗಮಕ್ಕೆ 50ಕ್ಕೂ ಹೆಚ್ಚು ಕವಿಗಳು, ಸಾಹಿತ್ಯಾಭಿಮಾನಿಗಳು ಸೇರಿ ಅಗಲಿದ ಸ್ಥಳೀಯ ಕವಿ/ಸಾಹಿತಿಗಳಾದ ವಿಡಂಬಾರಿ ಇಡಗುಂಜಿ,ವಿಷ್ಣು ಜೋಶಿ ಬಗ್ಗೋಣ ,ಅನಂತ ಕೃಷ್ಣ ಶಾಸ್ತ್ರಿ ಸಿರ್ಸಿ ಅವರಿಗೆ ಶ್ರದ್ಧಾಂಜಲಿ ನೀಡಿದರು.

75 ಹರಯದ ಚುರುಕಿನ ಚುಟುಕು ಕವಿ ಶ್ರೀ ಬೀರಣ್ಣ ನಾಯಕ ಸಾಂಪ್ರದಾಯಿಕ ಶೈಲಿಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಭೆ ಶ್ರೀ ಚಂದ್ರಶೇಖರ ಉಪಾಧ್ಯಾಯರ ಸ್ವಾಗತ ಹಾಗೂ ಪರಿಚಯ ಭಾಷಣಗಳೂಂದಿಗೆ ಮುಂದುವರೆಯಿತು.

ಇಂತಹ ಕಾರ್ಯಕ್ರಮಗಳಿಂದ ನಿರಂತರ ಸಂಪರ್ಕದಲ್ಲಿರಲು ಸಾಧ್ಯ ಎಂದ ಅವರು ಪ್ರತಿ ತಿಂಗಳೂ ಈ ನಾಡಿನ, ಈ ಜಿಲ್ಲೆಯ ಹಾಗೂ :ಕಾವ್ಯ ಸಂಚಲನ”ದ ಕವಿಗಳ ಕೃತಿಯ ಅವಲೋಕನ ಹಾಗೂ ಕವನ ವಾಚನ ಮಾಡೋಣ ಎಂದು ತಮ್ಮ ಸಂಕಲ್ಪವನ್ನು ಹಂಚಿಕೂಂಡರು.

RELATED ARTICLES  ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ ಪಠ್ಯಪೂರಕ ಚಟುವಟಿಕೆಗಳು ಅಗತ್ಯ: ರೋಹಿದಾಸ್.ಎಸ್.ಗಾಂವಕರ್

ಮುಖ್ಯ ಅತಿಥಿಗಳಾದ ಶ್ರೀ ಪುಟ್ಟು ಕುಲಕರ್ಣಿ ಅವರು ಬೇಂದ್ರೆಯವರ ಕಾವ್ಯ ಕಾಲಾತೀತ ಎಂದರು. ಅವರ ಕಾವ್ಯದಲ್ಲಿನ ಆಧ್ಯಾತ್ಮಿಕತೆ ,ವೈಜ್ಞಾನಿಕತೆ, ಸಮಕಾಲೀನತೆಯ ಬಗ್ಗೆ ವಿವರಿಸಿ ಕೆಲವು ಕವನವಾಚಿಸಿ ಅರ್ಥ ,ಅಂತರಾರ್ಥ, ವಿಶೇಷಾರ್ಥಗಳನ್ನ ವಿವರವಾಗಿ ವರ್ಣಿಸಿದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಶ್ರೀ ಟಿ ಜಿ ಭಟ್ಟರು
ಬೇಂದ್ರೆ ಈ ಯುಗದ ಮಹಾ ಕವಿ ಎಂದರು. ಬೇಂದ್ರೆಯವರ ಕವನದಲ್ಲಿ ಉಪನಿಷತ್ ತತ್ವಗಳ ಬೆಳಕಿದೆ, ಎಲ್ಲ ಕಾಲದಲ್ಲೂ ಸಲ್ಲುವ ಅಧ್ಯಯನಶೀಲರಾಗಿದ್ದ ಬೇಂದ್ರೆ ಋಷಿ ಸದೃಶ ಕವಿಗಳಾಗಿದ್ದರು ಎಂದರು. ಸಾಹಿತ್ಯದಲ್ಲಿ ಸ್ವಂತಿಕೆ ಇರಲಿ ಅನುಕರಣೆ ಬೇಡ ಎಂದು ಕಿರಿಯರಿಗೆ ಕಿವಿಮಾತು ಹೇಳಿದರು.

ಉದಯೋನ್ಮುಖ ಕವಿ ಶ್ರೀ ಚಿನ್ಮಯ ಹೆಗಡೆ ಧನ್ಯವಾದ ಸಮರ್ಪಸಿದರೆ ಚುಟುಕು ಕವಿ ಶ್ರೀ ಆರ್ ಎಮ್ ಹೆಗಡೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.

RELATED ARTICLES  ನೃತ್ಯಸ್ವರ ಕಲಾಕೇಂದ್ರದ ವಿದ್ಯಾರ್ಥಿಗಳ ರಂಗ ಪ್ರವೇಶ.

ಚಹಾವಿರಾಮದ ನಂತರ ಮುಂದುವರಿದ ಗೋಷ್ಠಿ ಯಲ್ಲಿ ಸರ್ವಶ್ರೀ ನರಸಿಂಹ ಭಟ್ಟ ಯಾಣ, ತಿ. ಗಣೇಶ ಮಾಗೋಡ, ವೆಂಕಟೇಶ ಬೈಲೂರು, ಮಂಜುನಾಥ ನಾಯ್ಕ ಯಲ್ವಡಿಕವೂರ, ಬಿರಣ್ಣನಾಯಕರು, ಕೃಷ್ಣಾನಂದ ಭಟ್ಟ, ಆರ್ ಎಮ್ ಹೆಗಡೆ, ಚಿನ್ಮಯ ಹೆಗಡೆ, ಕೊಂಡದಕುಳಿ ದಂಪತಿಗಳು, ವಿನಾಯಕ ಹೆಗಡೆ ಬದ್ರನ್ ,ಸದಾನಂದ ಹೆಗಡೆ, ವಿನಾಯಕ ಹೆಗಡೆ ಬಗ್ಗೋಣ, ಕವಿತಾ ಭಟ್ಟ, ರಾಧಿಕಾ ಭಟ್ಟ, ಸಂಧ್ಯಾ ರಾಣಿ,ರಾಜೇಂದ್ರ ಭಟ್ಟ ಸಿರ್ಸಿ, ಸೀತಾ ಉಪಾಧ್ಯಾಯ ಮುಂತಾದವರು ಬೇಂದ್ರೆಯವರ/ ಸ್ವರಚಿತ ಕವನಗಳನ್ನು ಹಾಡಿ/ವಾಚಿಸಿ ಕಾರ್ಯಕ್ರಮದ ಔಚಿತ್ಯವನ್ನ ಹೆಚ್ಚಿಸಿದರು.

ಇಂತಹ ಕಾರ್ಯಕ್ರಮ ಪ್ರತಿ ತಿಂಗಳೂ ಆಗಲಿ ಎಂದು ಆಗಮಿಸಿದ ಸಾಹಿತ್ಯ ಪ್ರೇಮಿಗಳು ಹಾರೈಸಿದರು.

ವರದಿ…ಶ್ರೀ ಆರ್ ಎಮ್ ಹೆಗಡೆ, ಕುಮಟ.