ಕುಮಟಾ: ತಾಲೂಕಿನ ಕೂಜಳ್ಳಿ ಹೆಗಲೆ ಮೂಲದ ಭಾರತೀಯ ಭೂಸೇನೆಯಲ್ಲಿ ಸೈನಿಕರಾಗಿದ್ದ ಅಶೋಕ ಮಂಜುನಾಥ ಹೆಗಡೆ ಸೋಮವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಅಕಾಲಿಕ ನಿಧನರಾಗಿದ್ದು ಇಂದು ಅವರ ಪಾರ್ಥೀವ ಶರೀರವನ್ನು ಕುಮಟಾಕ್ಕೆ ತರಲಾಗಿದೆ.
ಇವರು ದೇಶದ ಹಲವೆಡೆ ೧೯ ಮದ್ರಾಸ್ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಕೇರಳದಲ್ಲಿ ನಿಯೋಜನೆಗೊಂಡಿದ್ದರು. ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತಾಗಿದ್ದ ಅಶೋಕ ಹೆಗಡೆ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಅಶೋಕ ಹೆಗಡೆಯವರ ಮೂಲಮನೆ ಹೆಗಲೆಯಲ್ಲಿ ತಾಯಿ ಹಾಗೂ ಸಹೋದರ ವಾಸಿಸುತ್ತಿದ್ದಾರೆ. ವಾಲಗಳ್ಳಿ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಕೋಟೆಗುಡ್ಡೆಯಲ್ಲಿ ಮನೆ ಕಟ್ಟಿದ್ದ ಅಶೋಕ ಹೆಗಡೆ, ಅಲ್ಲಿಯೇ ಅವರ ಪತ್ನಿ, ಪುತ್ರಿ ಹಾಗೂ ಅತ್ತೆ ವಾಸಿಸುತ್ತಿದ್ದರು. ರಜೆಯಲ್ಲಿ ಕೋಟೆಗುಡ್ಡೆಯ ಸ್ವಗೃಹಕ್ಕೆ ಬಂದು ಹೋಗುತ್ತಿದ್ದ ಅಶೋಕ ಹೆಗಡೆ ಕೆಲ ತಿಂಗಳ ಹಿಂದೆ ಊರಿಗೆ ಬಂದು ಹೋಗಿದ್ದರು ಎನ್ನಲಾಗಿದೆ.
ಸೇನೆಯಲ್ಲಿರುವ ಕುಮಟಾದ ರಾಜೀವ ಶಾಮಾ ನಾಯ್ಕ ಕುಡ್ತಗಿಬೈಲ್ ಇವರ ನೇತ್ರತ್ವದಲ್ಲಿ ಪಾರ್ಥಿವ ಶರೀರವನ್ನು ಕುಮಟಾಗೆ ತರಲಾಗಿದ್ದು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಪ್ರಮುಖರು ಆಗಮಿಸಿ ವೀರ ಯೋಧನಿಗೆ ನಮನ ಸಲ್ಲಿಸಿದ್ದಾರೆ.