ಕಾರವಾರ: ‘ಹವ್ಯಕ ಸಮುದಾಯದವರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಮುದಾಯದವರು ತಮ್ಮ ಬುದ್ಧಿವಂತಿಕೆಯ ಸಾಮರ್ಥ್ಯವನ್ನು ಜಿಲ್ಲೆಯಿಂದಾಚೆಗೆ ವಿಸ್ತರಿಸಬೇಕು’ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಅಂಕೋಲಾ ತಾಲ್ಲೂಕಿನ ಶೇವ್ಕಾರ ಗ್ರಾಮದ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ‘ಹವ್ಯಕ ಸಮ್ಮೇಳನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಚಿವರಾದ ಬಳಿಕ ತಮ್ಮ ಹುಟ್ಟೂರಿಗೆ ನೀಡಿದ ಮೊದಲ ಭೇಟಿ ಇದಾಗಿತ್ತು.

‘ಬ್ರಾಹ್ಮಣರ ಸಂಖ್ಯೆ ಜಾಸ್ತಿಯಿರುವಲ್ಲಿ ಒಗ್ಗಟ್ಟು ಕಡಿಮೆಯಿದೆ. ಎಲ್ಲರೊಳಗೆ ಒಂದಾಗಿ ಸಂಘಟಿತರಾಗುವ ಮನೋಭಾವವನ್ನು ಮೂಡಿಸಿಕೊಳ್ಳಬೇಕು. ಆದರಾತಿಥ್ಯದಲ್ಲಿ ಬೇರೆಲ್ಲಾ ಸಮುದಾಯಗಳಿಗಿಂತ ಹವ್ಯಕ ಸಮುದಾಯವೇ ಉತ್ತಮವಾಗಿದೆ. ಆದರೆ, ಮಾನಸಿಕ ಸ್ಥಿತಿಗತಿಯಲ್ಲಿ ಇನ್ನಷ್ಟು ಸದೃಢಗೊಳ್ಳಬೇಕಿದೆ. ಉನ್ನತ ಶಿಕ್ಷಣ ಪಡೆಯಲು ಬಯಸುವ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಆರ್ಥಿಕ ಸಮಸ್ಯೆಯಿರಬಹುದು. ಅಂಥವರನ್ನು ಸಮಾಜವೇ ಪೋಷಿಸಬೇಕು’ ಎಂದು ಹೇಳಿದರು.

RELATED ARTICLES  ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಂಕೋಲಾದ ತುಳಸಿ ಗೌಡ.

ಸನ್ ಫ್ಯಾನ್ ಎನರ್ಜಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಈಶ್ವರ ಹೆಗಡೆ ಮಾತನಾಡಿ, ‘ಯುವಕರು ಕೌಶಲ ವೃದ್ಧಿಸಿಕೊಳ್ಳಲೂ ಗಮನ ಹರಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಅಂಕ ಗಳಿಸಿದರೂ ನೌಕರಿ ಖಾತ್ರಿಯಿಲ್ಲ. ನಾವೇ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬೇಕು. ಇದರ ಜೊತೆಗೆ ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯಾಗಬೇಕು’ ಎಂದರು.

ಸಚಿವ ಶಿವರಾಮ ಹೆಬ್ಬಾರ ಅವರಿಗೆ ಅಂಕೋಲಾ ಹವ್ಯಕ ಸಂಘಟಿತ ಸಾಂಸ್ಕೃತಿಕ ಸಂಘದಿಂದ ‘ಹವ್ಯಕ ಅಗ್ರಣಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೃಷಿಕನನ್ನು ವಿವಾಹವಾದ ಪದವೀಧರೆ ವಿದ್ಯಾ ಕೃಷ್ಣಮೂರ್ತಿ ಹೆಬ್ಬಾರ ಅವರಿಗೆ ‘ಹವ್ಯಕ ಪಾರಿಜಾತ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಬಿ.ಕೆ.ರಾಜೇಶ್‌ ಹಾಗೂ ಸೌಮ್ಯಾ ಹೆಬ್ಬಾರ ಅವರಿಗೆ ‘ಆರ್ಥಿಕ ಚೇತನ ಪುರಸ್ಕಾರ’ ನೀಡಲಾಯಿತು. 50ಕ್ಕೂ ಹೆಚ್ಚು ಹವ್ಯಕ ಸಾಧಕರು ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದರು.

RELATED ARTICLES  ಮಿರ್ಜಾನ್ ಉರ್ದು ಶಾಲಾ ಜಾಗದಲ್ಲಿದ್ದ ಅನಧಿಕೃತ ಅಂಗಡಿ ತೆರವು.

ಅಖಿಲ ಹವ್ಯಕ ಮಹಾಸಭಾ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಳವಳ್ಳಿ, ಡೋಂಗ್ರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ತಾಲ್ಲೂಕು ಹವ್ಯಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ಪಿ.ಭಟ್ಟ, ವಕೀಲ ಆರ್.ಎಂ.ಹೆಗಡೆ ಸಿದ್ದಾಪುರ ಇದ್ದರು.

ಯಾರಿಗೆ, ಯಾವ ಪ್ರಶಸ್ತಿ?

ಗಣಿತ ಸೌರಭ;ಎಂ.ಜಿ.ಹೆಗಡೆ ಅಂಕೋಲಾ

ಯಕ್ಷ ಸೌರಭ;ಈಶ್ವರ ಹೆಬ್ಬಾರ ಕಬಗಾಲ

ಕೃಷಿ ಸೌರಭ;ಶ್ರೀಧರ ಭಟ್ಟ ಕೋನಾಳ

ಸಂಗೀತ ಸೌರಭ;ಗುರುಮೂರ್ತಿ ವೈದ್ಯ ಹೆಗ್ಗಾರ

ಸಾಹಿತ್ಯ ಸೌರಭ;ಪದ್ಮನಾಭ ಭಟ್ಟ ಶೇವ್ಕಾರ

ನಾಟ್ಯ ಸೌರಭ;ವಿನುತಾ ಹೆಗಡೆ ಕಲ್ಲೇಶ್ವರ