ಕುಮಟಾ : ರೋಟರಿ ಕ್ಲಬ್ ಕುಮಟಾ, ಶ್ರೀಮಜ್ಜಗದ್ಗುರುಶಂಕರಾಚಾರ್ಯ ಮಹಾ ಸಂಸ್ಥಾನಮ್ ಶ್ರೀ ಸಂಸ್ಥಾನ ಗೋಕರ್ಣ, ಶ್ರೀ ರಾಮಚಂದ್ರಾಪುರ ಮಠ ಹವ್ಯಕ ಮಂಡಲ ಕುಮಟಾ ಹಾಗೂ ಅಖಿಲ ಹವ್ಯಕ ಮಹಾಸಭಾ(ರಿ) ಬೆಂಗಳೂರು, ಉತ್ತರ ಕನ್ನಡ ಜಿಲ್ಲಾಘಟಕದ ಆಶ್ರಯದಲ್ಲಿ ದಿವಂಗತ ಆರ್,ಎಸ್, ಭಾಗ್ವತ್ ಇವರಿಗೆ ಶ್ರದ್ಧಾಂಜಲಿ ಸಭೆ ಕುಮಟಾದ ರೋಟರಿಯ ನಾದಶ್ರೀ ಕಲಾಕೇಂದ್ರದಲ್ಲಿ ನಡೆಯಿತು.

ಹಾಜರಿರುವ ಎಲ್ಲರೂ ಆರ್.ಎಸ್ ಭಾಗವತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಗಲಿದ ಚೇತನದ ಸದ್ಗತಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಕುಮಟಾದಲ್ಲಿ ಸಹಸ್ರಾರು ಸಂತರನ್ನು ಕರೆಸುವಾಗ ನನ್ನನ್ನು ಹುರಿದುಂಬಿಸಿ ಆ ಸಂತ ಸಮಾಗಮದ ಸಮಿತಿಯ ಗೌರವ ಕಾರ್ಯದರ್ಶಿಯಾಗಿ ನನ್ನನ್ನುಬತೊಡಗಿಸಿದವರು ಆರ್.ಎಸ್ ಭಾಗವತರು. ಇಂತಹ ಪುಣ್ಯಾತ್ಮರ ಮಾದರಿಯ ಅನೇಕರು ಕುಮಟಾದಲ್ಲಿ ಹುಟ್ಟುವಂತಾಗಲಿ, ದಿವ್ಯ ಚೇತನಗಳು ಮತ್ತೆ ಮತ್ತೆ ಹುಟ್ಟಿ ಈ ಪ್ರದೇಶವನ್ನು ಸಂಪನ್ನ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ರೋಟರಿ ಅಧ್ಯಕ್ಷ ಸುರೇಶ ಭಟ್ಟ ಭಾವುಕರಾಗಿ ನುಡಿನಮನ ಸಲ್ಲಿಸಿದರು.

ಶ್ರೀ ರಘೂತ್ತಮ ಮಠ ಕೆಕ್ಕಾರಿನ ಅಧ್ಯಕ್ಷರಾದ ಎಂ.ಕೆ ಹೆಗಡೆ ಮಾತನಾಡಿ ಭಾಗವತರು ಎಂದರೆ ಆರ್.ಎಸ್ ಭಾಗವತರು ಎಂಬಂತೆ ಕುಮಟಾದಲ್ಲಿ ಬದುಕಿದ ಹಿರಿಯ ಜೀವ ಇವರು. ಕುಮಟಾ ಹೊನ್ನಾವರದ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವತರ ಪಾಲಿತ್ತು. ಶ್ರೀ ರಾಮಚಂದ್ರಾಪುರ ಮಠದ ಶ್ರೀಗಳು ಚಂದಾವರ ಸೀಮೆಗೆ ಬರುವಾಗ ಗುರುಗಳ ಸ್ವಾಗತಕ್ಕೆ ಭಾಗವತರ ಮನೆಯವರು ಅಥವಾ ಸಭಾಹಿತರ ಮನೆಯವರು ಇರಬೇಕು ಎಂಬಂತೆ ಇತ್ತು. ಅದರಂತೆ ನಡೆದವರು ಆರ್.ಎಸ್ ಭಾಗವತರು. ಸಹಕಾರಿ ರಂಗ ಉಳಿಯಲು ಕಾರಣರಾದರು ಹಾಗೂ ಉತ್ತರ ಕನ್ನಡದಲ್ಲಿ ಸಹಕಾರಿ ಕ್ಷೇತ್ರ ಹಾಗೂ ಸೊಸೈಟಿಯನ್ನು ಉಳಿಸಿದ ಹಿರಿಮೆ ಭಾಗವತರಿಗೆ ಸೇರುತ್ತದೆ ಎಂದರು. ಆರ್.ಎಸ್ ಭಾಗವತರಂತಹ ಚೇತನ ಹವ್ಯಕ ಸಮಾಜದಲ್ಲಿ ಇತ್ತು ಎಂಬುದು ಸಹಸ್ರಾರು ವರ್ಷಗಳ ಕಾಲ ಶಾಶ್ವತ ಎಂದರು. ಕುಮಟಾದಲ್ಲಿ “ನಾಗರೀಕ ಸನ್ಮಾನ” ಪಡೆದ ಏಕೈಕ ವ್ಯಕ್ತಿ ಭಾಗವತರು. ಸಣ್ಣವರಿಂದ ಹಿರಿಯರವರೆಗೆ ಒಂದೇ ರೀತಿ ಮಾತನಾಡಿಸಿ ಪ್ರೀತಿಯಿಂದ ನೋಡುವ ವ್ಯಕ್ತಿ ಆರ್.ಎಸ್ ಭಾಗವತರಾಗಿದ್ದರು. ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡಬಲ್ಲ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡು ನಮ್ಮ ಕರಾವಳಿ ಬಡವಾಗಿದೆ ಎಂದು ಅಭಿಪ್ರಾಯಪಟ್ಟರು.

RELATED ARTICLES  ಚಂದ್ರಯಾನ-೩ ರ ಯಶಸ್ಸು - ಸರಸ್ವತಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಂಭ್ರಮಾಚರಣೆ.

ಕೆಲವು ಜನರು ಕೆಲವು ಕಾಲ ಆತ್ಮೀಯರಾಗಿ ಇರುತ್ತಾರೆ. ಆದರೆ ಭಾಗವತರ ಆತ್ಮೀಯತೆಗೆ ಬಂದವರು ಎಂದಿಗೂ ಆತ್ಮೀಯರಾಗಿಯೇ ಇದ್ದರು. ಅಂತಹ ವ್ಯಕ್ತಿತ್ವ ಅಂತಹ ಪ್ರೇಮ ಮೂರ್ತಿ ಭಾಗವತರಾಗಿದ್ದರು. ಒಮ್ಮೆ ಒಪ್ಪಿದ ವಿಷಯದ ಬಗೆಗಿನ ಅವರ ನಿಷ್ಠೆ ಮಾತ್ರ ಅಚಲವಾಗಿತ್ತು. ಗುರು ಪೀಠಕ್ಕೆ, ಸಮಾಜದ ಕೆಲ ವಿಷಯದ ಬಗ್ಗೆ ಅವರ ಅಚಲ ನಿಷ್ಠೆಯನ್ನು ನಾವು ಬೆಳೆಸಿಕೊಳ್ಳಬೇಕು. ಭಾಗವತರಿರುವ ಸಭೆಯ ಗಂಭೀರತೆಯನ್ನು ನಾನು ಗಮನಿಸಿದ್ದೇನೆ. ಅವರ ಮಾರ್ಗದರ್ಶನ ಪಡೆದ ನಾವುಗಳು ಧನ್ಯರು. ಅಂತಹ ಚೇತನ ನಮ್ಮೊಂದಿಗಿಲ್ಲ ಎಂಬುದು ಬಹಳ ದುಃಖದ ವಿಚಾರ. ಅವರ ಜೀವನ ನಮಗೆಲ್ಲರಿಗೆ ಮಾದರಿ ಎಂದು ರಾಮಚಂದ್ರಾಪುರ ಮಠದ ಸಂಘಟನಾ ಖಂಡದ ಶ್ರೀಸಂಯೋಜಕ ಮಂಜುನಾಥ ಭಟ್ಟ ಸುವರ್ಣಗದ್ದೆ ಅಭಿಪ್ರಾಯಪಟ್ಟರು.

ಆರ್.ಎಸ್ ಭಾಗವತರ ಪುತ್ರ ಶ್ರೀಧರ ಭಾಗ್ವತ್ ನುಡಿನಮನ ಸಲ್ಲಿಸಿ, ಆರ್ ಎಸ್ ಭಾಗವತರು ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು ಕಷ್ಟಪಟ್ಟು ಬದುಕು ಕಟ್ಟಿಕೊಂಡವರು. ಸಹಕಾರ ರಂಗದಲ್ಲಿ ಪ್ರತಿಯೊಬ್ಬರಿಗೂ ಗುರುವಾಗಿ ಇದ್ದವರು. 55 ವರ್ಷಗಳ ಕಾಲ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾಗಿ, ನ್ಯಾಯಮೂರ್ತಿಯಾಗಿ ಬದುಕು ಕಂಡವರು. ಆರ್ ಎಸ್ ಭಾಗವತರು ಖೂರ್ಚಿಯ ಮೇಲೆ ಕುಳಿತಿದ್ದರೆ ಆ ಖುರ್ಚಿಯನ್ನೂ ಗೌರವದಿಂದ ಕಾಣುವಷ್ಟರ ಮಟ್ಟಿಗೆ ಅವರು ತಮ್ಮ ಪ್ರಭಾವ ಬೆಳೆಸಿಕೊಂಡಿದ್ದರು. ಸಮಾಜದ ಬಗ್ಗೆ ಕಳಕಳಿ ಹೊಂದಿದ ಅವರು ನಮ್ಮೆಲ್ಲರ ಮಾರ್ಗದರ್ಶಕರಾಗಿ ಇದ್ದಾರೆ, ಸದಾ ನಮ್ಮ ಬದುಕಿಗೆ ಬೆಳಕಾಗಿ ದಾರಿದೀಪವಾಗಿ ಇದ್ದಾರೆ ಎಂದರು.

ಭಾಗವತರ ಇನ್ನೊರ್ವ ಪುತ್ರ ಸೀತಾರಾಮ ಭಾಗವತ್ ಮಾತನಾಡಿ ನಮ್ಮ ತಂದೆ ಒಂದು ಶಕ್ತಿಯಾಗಿ ಬದುಕಿದವರು. ಬಡವರಿಗೆ ಅಗತ್ಯ ಇರುವ ಆರ್ಥಿಕ ಸಹಕಾರ ನೀಡಿ ಬದುಕಿಗೆ ಆಸರೆಯಾಗಿದ್ದರು. ಪರಿಪೂರ್ಣವಾಗಿ ಎಲ್ಲವನ್ನೂ ಅರಿತ ನಂತರವೇ ಕಾರ್ಯ ಮಾಡುತ್ತಿದ್ದ ಭಾಗವತರು ಯಾರ ಬಗ್ಗೆಯೂ ವಕ್ರದೃಷ್ಟಿ ಇಲ್ಲದೆ ಎಲ್ಲರನ್ನೂ ಸೇರಿಸಿಕೊಂಡು ಬದುಕನ್ನು ಮಾದರಿಯಾಗಿಸಿಕೊಂಡು ಬಂದವರು. ಎಲ್ಲರನ್ನೂ ಪ್ರೀತಿಸುವ ಹಾಗೂ ಎಲ್ಲರನ್ನೂ ಏಕ ದೃಷ್ಟಿಯಿಂದ ನೋಡುವ ಇವರ ವ್ಯಕ್ತಿತ್ವಕ್ಕೆ ಸಹಕಾರಿ ರಂಗವೇ ಇವರನ್ನು ಒಪ್ಪಿತು ಎಂದು ಅಭಿಪ್ರಾಯಪಟ್ಟರು. ಆರ್.ಎಸ್ ಭಾಗವತರು ಕೊನೆಯ ಅವಧಿಯಲ್ಲಿ ಹಾಸಿಗೆ ಹಿಡಿದರೂ ಯಾರ ಋಣವನ್ನೂ ಇಟ್ಟುಕೊಳ್ಳದೆ ಕೊನೆಯುಸಿರೆಳೆದರು. ಅವರ ತತ್ವಗಳು ನಮಗೆ ಮಾದರಿ ಎಂದರು. ಮತ್ತೆ ಆರ್.ಎಸ್ ಭಾಗವತರು ಹುಟ್ಟುವುದಾದರೆ ನಮ್ಮ ಕುಟುಂಬದಲ್ಲಿಯೇ ಹುಟ್ಟಲಿ ಎಂದು ಭಾವುಕರಾಗಿ ಕಣ್ಣೀರಿಟ್ಟರು.

RELATED ARTICLES  ಆದರ್ಶ ನಾಯಕ ವಾಜಪೇಯಿಯವರಿಗೆ ಕುಮಟಾದಲ್ಲಿ ಶ್ರದ್ಧಾಂಜಲಿ!

ಮಗಳು ಮಮತಾ ಭಾಗವತ್ ಮಾತನಾಡಿ ನಮ್ಮ ಪಪ್ಪಾ ನನಗೆ ಕೆಲಸದಲ್ಲಿ ದೇವರನ್ನು ಕಾಣು ಎಂದಿದ್ದರು. ಪಪ್ಪಾ ಕೊನೆಯುಸಿರು ಎಳೆದರೂ ನಾನು ಅಪ್ಪನ ಮಾತಿನಂತೆ ನನಗಾಗಿ ಕಾದಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಿಯೇ ಬಂದೆ. ಅವರ ಮಾತುಗಳು ಎಂದಿಗೂ ನೆನಪಿನಲ್ಲಿ ಇರುವಂತದ್ದು. ಕೆಲಸ ಮಾಡುವಾಗ ಎಲ್ಲರನ್ನೂ ತಂದೆಯಂತೆ ಕಾಣಲು ಅವರು ಹೇಳಿದ ಮಾತನ್ನು ನೆನಪಿಸಿ ಕಣ್ಣೀರಿಟ್ಟರು. ಪಪ್ಪನ ಮಗಳಾಗಿ ಮುಂದಿನ ಜನ್ಮದಲ್ಲಿಯೂ ಹುಟ್ಟುವೆನೆಂದು ಅವರು ಗದ್ಗದಿತರಾದರು.

ದಂತ ವೈದ್ಯ ಡಾ.ಸುರೇಶ್ ಹೆಗಡೆ ಮಾತನಾಡಿ ಕಾಲವಾದ ಮನೆಯಲ್ಲಿ ಅವರ ಆತ್ಮಶಾಂತಿಗೆ ಸ್ಮರಿಸೋಣ,ಸಂಪ್ರದಾಯ ಬಿಡದೆ ಬದುಕುವಂತಾಗಲಿ ಎಂದರು.

ಹವ್ಯಕ ಮಹಾಸಭಾದ ನಿರ್ದೇಶಕ ಆರ್.ಜಿ ಹೆಗಡೆ, ವಿ.ಜಿ ಹೆಗಡೆ, ಎಸ್.ವಿ ಹೆಗಡೆ, ಎಸ್.ಎನ್ ಭಟ್ಟ ಜಿ.ಎಲ್ ನಾಯ್ಕ, ಗುರುದಾಸ ಗಾಯ್ತೊಂಡೆ ಹಾಗೂ ಇತರರು ಆರ್.ಎಸ್ ಭಾಗವತರ ಬಗ್ಗೆ ತಮ್ಮ ಒಡನಾಟ ಹಾಗೂ ಅವರ ಉದಾರ ವ್ಯಕ್ತಿತ್ವದ ಬಗ್ಗೆ ಸ್ಮರಿಸಿ ನುಡಿನಮನ ಸಲ್ಲಿಸಿದರು. ಆರ್.ಎಸ್ ಭಾಗವತರ ಸೊಸೆ ಮಾಲತಿ ಭಾಗ್ವತ್ ಭಾಗವತರ ಕುರಿತಾದ ಸ್ವರಚಿತ ಕವನ ವಾಚಿಸಿದರು. ಭಾಗವತರ ಮೊಮ್ಮಗ ಭುವನ್ ಭಾಗವತ್, ಸೊಸೆ ಸ್ವಾತಿ ಭಾಗ್ವತ್ ಹಾಗೂ ಭಾಗವತರ ಕುಟುಂಬದವರು ಹಾಜರಿದ್ದರು. ಜಿ.ಎಸ್ ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು. ಹವ್ಯಕ ಮಹಾಸಭಾದ ನಿರ್ದೇಶಕ ಅರುಣ ಹೆಗಡೆ ನಿರೂಪಿಸಿದರು.