ಮಂಗಳೂರು: ಹವ್ಯಕರ ಮೂಲ ನೆಲೆ ಎನಿಸಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಹೈಗುಂದದಲ್ಲಿರುವ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಅಷ್ಟಬಂಧ- ಪುನಃಪ್ರತಿಷ್ಠಾ-ಬ್ರಹ್ಮಕಲಶೋತ್ಸವ ಶುಕ್ರವಾರ ಆರಂಭವಾಗಿದ್ದು, ಈ ತಿಂಗಳ 17ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟಿರುವ ದುರ್ಗಾಂಬಿಕಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, 15ರಂದು ಬೆಳಿಗ್ಗೆ 11.47ರ ವೃಷಭ ಲಗ್ನದಲ್ಲಿ ಶ್ರೀದೇವರ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ, ಧ್ವಜ ಬಲಿ, ಅಕ್ಷತಾ ಹವನ, ದುರ್ಗಾಶಾಂತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮಧ್ಯಾಹ್ನ 2.30ಕ್ಕೆ ನಡೆಯುವ ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಪರಮಪೂಜ್ಯ ಶ್ರೀಮಜ್ಜಗದಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ವಹಿಸುವರು. ಶ್ರೀ ಕ್ಷೇತ್ರ ಹೊರನಾಡಿನ ಭೀಮೇಶ್ವರ ಜೋಶಿ, ಸಿಂಗಧೂರು ಕ್ಷೇತ್ರದ ಪ್ರಧಾನ ಅರ್ಚಕ ಎಸ್.ಪಿ.ಶೇಷಗಿರಿ ಭಟ್ಟ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ಆರ್.ವಿ.ದೇಶಪಾಂಡೆ, ಸುನೀಲ ನಾಯ್ಕ, ದಿನಕರ ಶೆಟ್ಟಿ, ಮಾಜಿ ಶಾಸಕರಾದ ಮಂಕಾಳು ವೈದ್ಯ, ವೈ.ಎಸ್.ದತ್ತ, ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷ ಗಿರಿಧರ ಕಜೆ, ಉತ್ತರ ಕನ್ನಡ ಜಿಲ್ಲಾಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇಋ, ತಾಲೂಕು ಪಂಚಾಯ್ತಿ ಅಧ್ಯಕ್ಷ ಉಲ್ಲಾಸ ಈಶ್ವರ ನಾಯ್ಕ, ಗ್ರಾಮಪಂಚಾಯ್ತಿ ಅಧ್ಯಕ್ಷೆ ರಾಜೇಶ್ವರಿ ನಾಯ್ಕ, ಜಿ.ಪಂ.ಮಾಜಿ ಅಧ್ಯಕ್ಷ ಆರ್.ಎಸ್.ರಾಯ್ಕರ್, ಪಿ.ಟಿ.ನಾಯ್ಕ ಮೂಡ್ಕಣಿ ಮತ್ತಿತರರು ಭಾಗವಹಿಸುವರು.
ಅಂದು ಸಂಜೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಜಿ.ಎಸ್.ಹೆಗಡೆ ಅಣ್ಣುಹಿತ್ತಿಲು ಅವರು ನಾದಸೇವೆ ಗೈಯುವರು. ಬೆಂಗಳೂರಿನ ಲಕ್ಷ್ಮೀನಾರಾಯಣ ಭಟ್ಟ ಅವರಿಂದ ಗಾಯನ, ಗುರುರಾಜ ಹೆಗಡೆ ತಬಲಾ ಮತ್ತು ಸತೀಶ್ ಹೆಗ್ಗಾರ ಹಾರ್ಮೋನಿಯಂ ಸಾಥ್ ನೀಡುವರು. ಸಂಜೆ 7ರಿಂದ ಸುಮಾ ಹೆಗಡೆ ಗಡಿಗೆಹೊಳೆ ಸಂಗಡಿಗರಿಂದ ಮಹಿಳಾ ಯಕ್ಷಗಾನ ನಡೆಯಲಿದೆ ಎಂದು ಪ್ರಕಟಣೆ ಹೇಳಿದೆ.
14ರಂದು ಶಿವಾನಂದ ಭಟ್ ಸಂಗಡಿಗರ ಸಂಗೀತ ಸಂಧ್ಯಾ, 16ರಂದು ಹೈಗುಂದ ನಡುಗಟ್ಟೆ ಗೆಳೆಯರಿಂದ ನಾಟಕ, 17ರಂದು ಭಜನಾ ಕಾರ್ಯಕ್ರಮಗಳು ನಡೆಯಲಿವೆ.
17ರಂದು ಮಂಗಳವಾರ ಬೆಳಿಗ್ಗೆ 9ರಿಂದ ಮೂಲಮಂತ್ರ ಹವನ, ನವಚಂಡಿ ಹವನ, ಅವಶಿಷ್ಟ ಹವನ, ಶ್ರೀದೇವರಿಗೆ ಪೂರ್ಣಸಾನ್ನಿಧ್ಯ ಸಹಸ್ರ ಕುಂಭಾಭಿಷೇಕ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ಕ್ಷೇತ್ರ ಮಹಿಮೆ
ಶರಾವತಿ ನದಿಯ ಸುಂದರ ದ್ವೀಪಗಳಲ್ಲೊಂದಾದ ಹೈಗುಂದ ಸಹಸ್ರಾರು ವರ್ಷಗಳ ಪ್ರಾಚೀನ ಹಿನ್ನಲೆಯುಳ್ಳ ಪುಣ್ಯಭೂಮಿ. ದೇವತಾಮೂರ್ತಿಗಳು, ಶಿವಲಿಂಗಗಳು, ಭಗ್ನ ಶಿಲಾವಶೇಷ ಇಲ್ಲಿಕಂಡುಬರುತ್ತಿದ್ದು, ಅಚ್ಚರಿಯೆಂಬಂತೆ ಕರ್ನಾಟಕದ ಅಪರೂಪದ ಬುದ್ಧ ವಿಗ್ರಹ ಕೂಡಾ ಇಲ್ಲಿದೆ. ಭವ್ಯ ಹಾಗೂ ಆಕರ್ಷಣೀಯ ವಿಷ್ಣು ಮತ್ತು ಯಕ್ಷಶಿಲ್ಪಗಳು ಇಲ್ಲಿ ಕಂಡುಬರುತ್ತವೆ. ಕದಂಬರು ಇಲ್ಲಿ ದುರ್ಗಾಂಬಿಕೆಯನ್ನು ನೆಲೆಗೊಳಿಸಿದರು ಎಂದು ಇತಿಹಾಸ ಹೇಳುತ್ತದೆ. ಪ್ರಥಮ ಕದಂಬ ದೊರೆ ಮಯೂರವರ್ಮ ತನ್ನ ನಾಡಿನಲ್ಲಿ ನಿತ್ಯ ಯಜ್ಞ ಯಾಗಾದಿಗಳನ್ನು ನೆರವೇರಿಸಲು ಉತ್ತರ ಭಾರತದಿಂದ ಕೆಲ ಬ್ರಾಹ್ಮಣ ಕುಟುಂಬಗಳನ್ನು ಕರೆತಂದು ಹೈಗುಂದದಲ್ಲಿ ನೆಲೆಗೊಳಿಸಿದ್ದನು ಎನ್ನುವುದು ಐತಿಹ್ಯ. ಇದಕ್ಕೆ ಪುರಾವೆ ಎಂಬಂತೆ ಹೈಗುಂದದಲ್ಲಿ ಯಜ್ಞ ಕುಂಡಗಳ ಕುರುಹುಗಳಿದ್ದು, ಪುರಾತನ ಇಟ್ಟಿಗೆಗಳಿಂದ ನಿರ್ಮಿತ ಕುಂಡಗಳು ಕಂಡುಬರುತ್ತವೆ. ಹೈಗುಂದದ ಪುರವರಾಧೀಶ್ವರಿ ಶ್ರೀದುರ್ಗಾಂಬಿಕೆ ಹವ್ಯಕರಲ್ಲದೇ ಸಮಾಜದ ಹತ್ತು ಸಮಸ್ತರ ಆರಾಧ್ಯ ದೇವತೆ.