ಕಾರವಾರ: ಕೊರೋನಾ ವೈರಸ್ ಆತಂಕ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಹಿನ್ನಲೆ ಕರಾವಳಿ ಜಿಲ್ಲೆ ಉತ್ತರ ಕನ್ನಡಕ್ಕೆ ಪ್ರವಾಸಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿವೆ. ವಾರಾಂತ್ಯವಾಗಿದ್ದರೂ ಸಹ ಕಾರವಾರ, ಗೋಕರ್ಣ ಹಾಗೂ ಮುರ್ಡೇಶ್ವರ ಕಡಲತೀರಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ತೀರಾ ವಿರಳವಾಗಿದ್ದು, ಕೊರೋನಾ ಆತಂಕದಿಂದಾಗಿ ಪ್ರವಾಸಕ್ಕೆ ಬರಲು ಹಿಂದೇಟು ಹಾಕಿದ್ದಾರೆ.
ಕಾರವಾರ ನಗರದಲ್ಲಿ ಬೆಳಿಗ್ಗೆ ಉದ್ಯಾನವನಗಳಲ್ಲಿಯೂ ಸಹ ವಾಯುವಿಹಾರಕ್ಕೆ ತೆರಳುವವರ ಸಂಖ್ಯೆ ಇಳಿಕೆಯಾಗಿದ್ದು, ಜನರು ಹೆಚ್ಚು ಪ್ರಮಾಣದಲ್ಲಿ ಸೇರುವ ಸ್ಥಳಗಳಿಗೆ ತೆರಳಲು ನಗರವಾಸಿಗಳು ಮನಸ್ಸು ಮಾಡುತ್ತಿಲ್ಲ. ಅಲ್ಲದೇ ನಗರದಲ್ಲಿ ಬೆಳಿಗ್ಗೆಯಿಂದಲೇ ಶಾಲಾ- ಕಾಲೇಜುಗಳು ಸರ್ಕಾರದ ಆದೇಶದಂತೆ ಸ್ಥಗಿತಗೊಂಡಿದ್ದು, ಮೋರ್ ಸೂಪರ್ ಮಾರ್ಕೆಟ್ ಅರ್ಧ ದಿನದ ಬಳಿಕ ಬಾಗಿಲು ಹಾಕಿದೆ. ತರಕಾರಿ ಮತ್ತು ಮೀನು ಮಾರುಕಟ್ಟೆಗಳಲ್ಲಿಯೂ ಜನರ ಓಡಾಟ ಕೊಂಚ ಕಡಿಮೆಯಾಗಿತ್ತು.