ಅಂಕೋಲಾ ತಾಲೂಕಿನ ಮಾಸ್ತಿ ಕಟ್ಟಾ ಅರಣ್ಯ ವಲಯದ ಸಬ್ಗುಳಿ ಗ್ರಾಮದ ಸರಹದ್ದಿನಲ್ಲಿ ಗಸ್ತು ತಿರುಗುತ್ತಿದ್ದ, ಅರಣ್ಯ ಇಲಾಖೆ ಸಿಬ್ಬಂದಿಯ ಜೀಪಿನ ಮೇಲೆ ಭಾನುವಾರ ತಡರಾತ್ರಿ ಅಪರಿಚಿತರು ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆ.

ನಾಡ ಬಂದೂಕಿನಿಂದ ಹಾರಿಸಿದ ಗುಂಡುಗಳು ಜೀಪಿನ ಮುಂಭಾಗದ ಗಾಜನ್ನು ಛಿದ್ರಗೊಳಿಸಿವೆ. ವಾಹನದಲ್ಲಿದ್ದ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಹಜರೆಸಾಬ್ ಕುಂದಗೋಳ, ಅರಣ್ಯ ರಕ್ಷಕರಾದ ಕಿರಣ್‌ಕುಮಾರ್ ನೀರಲಕಟ್ಟಿ, ಲಕ್ಷ್ಮೀಕಾಂತ ನಾಯ್ಕ, ರಾಜೇಶಸಾಬ್ ರಾಠಿ ಹಾಗೂ ಚಾಲಕ ರಾಮನಾಥ ನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

RELATED ARTICLES  ವಿಶಿಷ್ಟ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಮೂಡಿಸುವ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ : ದೇವಿದಾಸ ಮೊಗೇರ

‘ರಾತ್ರಿ 1 ಗಂಟೆಗೆ ಈ ದಾಳಿ ನಡೆದಿದೆ. ಅಪರಿಚಿತರು ಗಿಡದ ಮರೆಯಲ್ಲಿ ನಿಂತು ಗುಂಡು ಹಾರಿಸಿ, ಕತ್ತಲಲ್ಲಿ ಪರಾರಿಯಾಗಿದ್ದಾರೆ. ಬಳಿಕ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಇಡೀ ರಾತ್ರಿ ಹುಡುಕಿದರೂ ಯಾರೂ ಪತ್ತೆಯಾಗಿಲ್ಲ. ಸೋಮವಾರ ಬೆಳಿಗ್ಗೆಯಿಂದ ಮತ್ತೆ ಅವರಿಗಾಗಿ ಹುಡುಕಾಟ ನಡೆಸಿದ್ದೇವೆ’ ಎಂದು ಇನ್‌ಸ್ಪೆಕ್ಟರ್‌ ಬಸಪ್ಪ ಬುರ್ಲಿ ತಿಳಿಸಿದರು.

RELATED ARTICLES  ಕುಮಟಾದಲ್ಲಿ ಶಿವರಾಮ ಹೆಬ್ಬಾರ್: ಕತಗಾಲ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಚರ್ಚೆ.

ಶ್ವಾನ ದಳದ ನೆರವು ಪಡೆದು, ಕಾಡಿನಲ್ಲಿ ತಪಾಸಣೆ ನಡೆಸುತ್ತಿದ್ದೇವೆ ಎಂದು ಅವರು ವಿವರಿಸಿದರು.

‘ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಾಗವಾನಿ ತುಂಡುಗಳನ್ನು ಸಾಗಿಸುತ್ತಿದ್ದ ಚಂದ್ರಕಾಂತ ಡೊಂಗಾ ಗೌಡ ಎಂಬುವರನ್ನು ಕಳೆದ ಶನಿವಾರ ಬಂಧಿಸಲಾಗಿತ್ತು. ಇಂಥ ಹಲವು ಪ್ರಕರಣಗಳ ಬಗ್ಗೆ ಅಧಿಕಾರಿಗಳು ಗಂಭೀರವಾದ ತನಿಖೆ ನಡೆಸುತ್ತಿರುವುದರಿಂದ ಅವರ ಮನೋಬಲ ಕುಗ್ಗಿಸಲು ಈ ದಾಳಿ ನಡೆದಿರಬಹುದು’ ಎಂದು ಹಜರೆಸಾಬ್‌ ಶಂಕೆ ವ್ಯಕ್ತಪಡಿಸಿದ್ದಾರೆ.