ಶಿರಸಿ: ಶರೀರ ಎನ್ನುವುದೇ ಒಂದು ಕಂದಕ. ಇದು ಅಶಾಶ್ವತ. ಆನಂದಮಯನಾದ ಪರಮಾತ್ಮನೇ ಶಾಶ್ವತ. ಶಾಸ್ತ್ರಗಳ ಮಾರ್ಗದರ್ಶನವನ್ನು ಅರಿತುಕೊಂಡು ಶಾಶ್ವತನಾದ ಆನಂದಮಯನಾದ ಪರಮಾತ್ಮನತ್ತ ಸಾಗಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ನುಡಿದರು.
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ನಿಮಿತ್ತ, ಯಲ್ಲಾಪುರ ಸೀಮೆ ಹಾಗೂ ನಗರಭಾಗಿಯ ಶಿಷ್ಯ-ಭಕ್ತರು ಸಮರ್ಪಿಸಿದ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನುಡಿದರು.
ಪಾಪ ಕರ್ಮಗಳನ್ನು ತೊಳೆದುಕೊಳ್ಳು ಧರ್ಮಾಚರಣೆ ನಡಸಬೇಕು. ಧರ್ಮಾಚರಣೆ ನಡೆಸಿದರೆ ಆಯಾ ದಿವಸದ ಪಾಪ ಕರ್ಮಗಳನ್ನು ಅಂದಂದೇ ತೊಳೆದುಕೊಳ್ಳಬಹುದು ದಿನನಿತ್ಯವೂ ನಮ್ಮ ಶರೀರವು ಮಲ, ಮೂತ್ರ, ಉಸಿರು ಮತ್ತು ಬೆವರಿನ ರೂಪದಲ್ಲಿ, ಈ ನಾಲ್ಕು ವಿಧದಲ್ಲಿ ಕೊಳೆಯನ್ನು ಹೊರಹಾಕುತ್ತಿರುತ್ತದೆ ಹಾಗೆಯೇ ನಮ್ಮ ಮನಸ್ಸಿನಲ್ಲೂ ಕೊಳೆಯಿದೆ. ಅದುವೇ ಪಾಪಕರ್ಮಗಳ ಕೊಳೆ. ದೇಹದ ಕೊಳೆ ತೊಳೆಯದಿದ್ದರೆ ರೋಗವಾಗಿ ಕಾಡುತ್ತದೆ. ಅಂತೆಯೇ ಪಾಪಕರ್ಮಗಳ ಕೊಳೆಯನ್ನು ತೊಳೆದುಕೊಳ್ಳದಿದ್ದರೆ ಮುಂದೆ ಅದು ಪ್ರಾರಬ್ಧ ಕರ್ಮವಾಗಿ ಬಾಧಿಸುತ್ತದೆ ಎಂದರು.
ಪಾಪಚಕರ್ಮಗಳನ್ನು ತೊಳೆದುಕೊಳ್ಳಲು ನಿತ್ಯ ಕರ್ಮಾನುಷ್ಠಾನಗಳನ್ನು ಪ್ರತಿನಿತ್ಯವೂ ಮಾಡಬೇಕು. ದೇವರ ತೀರ್ಥಗ್ರಹಣದ ಮೂಲಕವೂ ಪಾಪಗಳನ್ನು ತೊಳೆದುಕೊಳ್ಳಬಹುದು. ತೀರ್ಥಕ್ಕೆ ವಿಶೇಷವಾದ ಶಕ್ತಿಯಿದೆ. ತೀರ್ಥವನ್ನು ತೆಗೆದುಕೊಳ್ಳುವುದರಿಂದ ಅಕಾಲಮೃತ್ಯು ಹರಣ, ಸರ್ವವ್ಯಾಧಿ ವಿನಾಶ, ಪಾಪಗಳ ನಿರ್ಮೂಲನೆಯಾಗುವುದು. ತೀರ್ಥವನ್ನು ಪಡೆಯಲು ಪೂಜೆ ಮಾಡುವುದು ಅನಿವಾರ್ಯ, ಪೂಜೆಯನ್ನು ಶಾಸ್ತ್ರೋಕ್ತವಾಗಿಯೇ ಮಾಡುತ್ತೇವೆ ಇದರಿಂದ ಮನೆಯೂ ಧಾರ್ಮಿಕವಾಗುತ್ತದೆ ಎಂದು ನುಡಿದರು.
ಮಾತೆಯರು ಹಾಗೂ ಭಕ್ತ ಮಹನೀಯರು ಬೆಳಗ್ಗೆ ಕುಂಕುಮಾರ್ಚನೆ, ಭಗವದ್ಗೀತಾಪಠನ, ಗಾಯತ್ರೀಜಪ, ಭಿಕ್ಷಾಸೇವೆ, ಪಾದುಕಾಪೂಜೆ ನೆರವೇರಿಸಿದರು.
ಪಿ.ಎಚ್.ಡಿ ಪದವಿ ಪಡೆದ ಮಠದ ಪಾಠಶಾಲೆಯ ಅದ್ವೈತ ವೇದಾಂತದ ಅಧ್ಯಾಪಕ ವಿದ್ವಾನ ಶಂಕರ ಭಟ್ಟ ಬಾಲಿಗದ್ದೆ ಅವರನ್ನು ಶ್ರೀಗಳು ಗೌರವಿಸಿದರು.