ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀಯುತ ವಿ.ಜಿ.ಹೆಗಡೆ ಚಿಟ್ಟಾಣಿ

ಚಿಟ್ಟಾಣಿ ಎಂಬುದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಏಳೆಂಟು ಮನೆಗಳಿರುವ ಕೇರಿ. ಆದರೆ ರಾಷ್ಟ್ರ ವ್ಯಾಪಿ ಸದ್ದು ಮಾಡಿದ ಹೆಸರು ಅದು. ಯಕ್ಷಗಾನ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಶ್ರೀ ರಾಮಚಂದ್ರ ಹೆಗಡೆಯವರ ಮನೆ ಇರುವ ಸ್ಥಳ. ನಮ್ಮ ಭಾಗದ ಮಾಜಿ ಮತ್ತು ಹಾಲಿ ಜಿಲ್ಲಾ ಪಂಚಾಯತ ಸದಸ್ಯರುಗಳಾದ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಶ್ರೀಮತಿ ಶ್ರೀಕಲಾ ಶಾಸ್ತ್ರಿಯವರ ಮನೆ ಇರುವ ಸ್ಥಳ. ಹೀಗಿರುವ ಚಿಟ್ಟಾಣಿಯಲ್ಲಿ ನಮ್ಮ ಅತ್ತೆಯ ಮನೆ ಇದೆ. ಶ್ರೀಯುತ ವಿ.ಜಿ.ಹೆಗಡೆ ಚಿಟ್ಟಾಣಿ ವರಸೆಯಲ್ಲಿ ನಮ್ಮ ಅತ್ತೆಯ ಮಗ. ವೃತ್ತಿಯಲ್ಲಿ ಶಿಕ್ಷಕ. ಪ್ರವೃತ್ತಿಯಲ್ಲಿ ಕ್ರಿಕೆಟ್ ಮೈದಾನನಲ್ಲೇ ತನ್ನ ಬಹುತೇಕ ವರ್ಷಗಳನ್ನು ಕಳೆಯುತ್ತಿರುವ ಅಸಾಮಾನ್ಯ ಅಗ್ರಗಣ್ಯ ಕ್ರಿಕೆಟ್‌ ಆಟಗಾರ.
ಕೆಲವರು ಸಣ್ಣವರಿರುವಾಗ ಆಡುತ್ತಾರೆ. ಸ್ವಲ್ಪ ದೊಡ್ಡವರಾದ ಮೇಲೆ ಸಂಸಾರ, ಉದ್ಯೋಗ ಇದರಲ್ಲೇ busy ಆಗಿ ಬಿಡುತ್ತಾರೆ. ಆದರೆ ನಮ್ಮ ವಿಶ್ವೇಶ್ವರಣ್ಣ ನಾನು ಚಿಕ್ಕವನಿರುವಾಗಿನಿಂದ ಈ ದಿನದವರೆಗೂ ಸಂತೇಗುಳಿ MCC ತಂಡದ ನಾಯಕ ಮತ್ತು star ಆಟಗಾರ. ಅದೆಂತಹ ಪ್ರೀತಿ ಕ್ರೀಡೆಯ ಮೇಲೆ ಎಂದರೆ…….. ಹೆಂಡತಿ ಮಕ್ಕಳು ಸಂಸಾರವನ್ನಾದರೂ ಬಿಟ್ಟಾನು! ಕ್ರಿಕೆಟ್ ಮ್ಯಾಚ್ ಬಿಡಲಾರ!??
ವಿ.ಜಿ.ಹೆಗಡೆ ಚಿಟ್ಟಾಣಿಯವರು ವೃತ್ತಿಯಲ್ಲಿ ಶಿಕ್ಷಕರು. ವಿದ್ಯಾರ್ಥಿಗಳಿಗೆ ಸರಳತೆ ಹಾಗೂ ಶೃದ್ಧೆಯಿಂದ ಪಾಠ ಮಾಡುವುದಷ್ಟೇ ಅಲ್ಲದೇ ಶಿಕ್ಷಕರ ಸಂಘದ ಸದಸ್ಯರೂ ಆಗಿ ಹಲವರಿಗೆ ನೆರವಾಗುತ್ತಾರೆ. ಸಂಬಂಧಿಕರ ಮನೆಯಲ್ಲಿ ಯಾರ ಮನೆಯಲ್ಲಿ ಕಾರ್ಯಕ್ರಮ ಆದರೂ ನಮ್ಮ ವಿಶ್ವೇಶರಣ್ಣ ಹಗಲು ರಾತ್ರಿ ಇದ್ದು ಕೆಲಸ ಮಾಡುತ್ತಾರೆ. ಉಸ್ತುವಾರಿ ನೋಡಿಕೊಳ್ಳುತ್ತಾರೆ. ಸ್ನೇಹಿತರೆಂದರೆ ಪಂಚಪ್ರಾಣ ನಮ್ಮ ವಿಶ್ವೇಶ್ವರಣ್ಣನಿಗೆ.
ನನ್ನನ್ನು ಬಾಲ್ಯದಿಂದಲೂ ತನ್ನ ಗಾಡಿಯ ಮೇಲೆ ಕೂಡ್ರಿಸಿಕೊಂಡು ಹತ್ತಾರು ಊರು ತಿರುಗಿಸಿ ನೂರಾರು ಕ್ರಿಕೆಟ್ ಮ್ಯಾಚ್ ಆಡಿಸಿದ ಮಹಾತ್ಮ ನಮ್ಮ ವಿಶ್ವೇಶ್ವರಣ್ಣ. ನನ್ನ ತಂದೆ ತಾಯಿಯರು ಅವನ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆಂದು ಬೈದರೂ ನನ್ನನ್ನು ಪುಸಲಾಯಿಸಿ ಅವರ ಮನವೋಲೈಸಿ ಕರೆದುಕೊಂಡೇ ಹೋಗುತ್ತಿದ್ದ.
ಇಂದಿಗೂ ಹವ್ಯಕ ವಿಕಾಸ ವೇದಿಕೆಯ ಕಾರ್ಯದರ್ಶಿಯಾಗಿ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್‌ ಸಂಘಟಿಸುತ್ತಾನೆ. ಬೆವರು ಹರಿಸಿ ದುಡಿಯುತ್ತಾನೆ. ಬಹುಶಃ ಇದಕ್ಕೇನಾದರೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಲ್ಲುವುದಾದರೆ ಅದು ನಮ್ಮ ವಿಶ್ವೇಶ್ವರಣ್ಣನಿಗೆ ಮೊದಲು ಸಲ್ಲಬೇಕು.
ಪ್ರೀತಿಯಿಂದ ಆಡಲು ಕರೆದುಕೊಂಡು ಹೋಗುವುದೇನೋ ಸರಿ ಆದರೆ ಪಂದ್ಯದಲ್ಲಿ ball ನ್ನು ಬಿಟ್ಟರೆ ಕಣ್ಣೀರು ಬರುವಷ್ಟು ಉಗಿಯುತ್ತಿದ್ದ. ಕೆಲವೊಮ್ಮೆ catch ಬಿಟ್ಟರಂತೂ ಕಿವಿ ಕಟ್ಟಿಕೊಂಡೇ ಆಟ ಆಡಬೇಕಿತ್ತು. ಅವನ ಬೈಗುಳವೇ ನಮಗೆ ಟ್ರೋಫಿ. ಆದರೆ ಹಿಗ್ಗಾಮುಗ್ಗಾ ಬೈದರೂ ನಮಗೆ ಅವನನ್ನು ನೋಡಿ ನಗು ಬರುತ್ತಿತ್ತೇ ವಿನಹ ಅವನ ಮೇಲೆ ಕೋಪವೇ ಬರುತ್ತಿರಲಿಲ್ಲ. ಅಕಸ್ಮಾತ್ ಅವನ ಬೈಗುಳಗಳನ್ನೆಲ್ಲಾ record ಮಾಡಿಕೊಂಡು ಅವನನ್ನು ಪೋಲೀಸರಿಗೊಪ್ಪಿಸಿದರೆ ಬಹುಶಃ ಜೀವಾವಧಿ ಶಿಕ್ಷೆ ಘೋಷಿಸಿಬಿಟ್ಟಾರು?????? ಆದರೆ ಅವನ ಬೈಗುಳವೇ ನಮಗೆ ಮಂತ್ರಾಕ್ಷತೆ. ಅದೇ ನಮಗೆ ಆಶೀರ್ವಾದ. ಹೃದಯವಂತ ನಮ್ಮ ವಿಶ್ವೇಶ್ವರಣ್ಣ. ಅವನೊಳಗೆ ಹುಳುಕಿಲ್ಲ. ಕೊಳಕಿಲ್ಲ. ಆಟದೊಳಗೆ ಗೆಲ್ಲಬೇಕೆಂಬ ಹಟ.
ಅವನ ಹತ್ತಿರದಿಂದ ಬಲ್ಲವರೆಲ್ಲರೂ ಅವನ ಹತ್ತಿರ ಗದರಿಸಿಕೊಂಡವರೇ….ಆದರೆ ಎಲ್ಲರಿಗೂ ವಿ.ಜಿ ಅಂದರೆ ಪ್ರಾಣಕ್ಕೆ ಪ್ರಾಣ ಕೊಡುವಷ್ಟು ಪ್ರೀತಿ. ಗುಂಡು ಎಸೆತ ಚಕ್ರ ಎಸೆತಗಳಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಆಟಗಾರ.
ನಮ್ಮ ವಿಶ್ವೇಶ್ವರಣ್ಣನ ಹೆಂಡತಿ ಅಂದರೆ ಅತ್ತಿಗೆ ಮಾಲಿನಿ….. ಖ್ಯಾತ ಯಕ್ಷಗಾನ ಕಲಾವಿದ ನೀಲ್ಕೋಡ ಶ್ರೀ ಶಂಕರ ಹೆಗಡೆಯವರ ಅಕ್ಕ. ಅವಳ ತಾಳ್ಮೆಗೊಂದು ದೊಡ್ಡ ಸಲಾಂ. ನಮ್ಮ ಅತ್ತೆ, ಮಾವ, ಅತ್ತಿಗೆಯವರ ಸಹನೆಯ ಮುಂದೆ ನಮ್ಮ ವಿಶ್ವೇಶ್ವರಣ್ಣ ಇನ್ನೂ ಮಗುವಾಗುತ್ತಾರೆ. ಊರಿಗೆ ಹುಲಿ ಮನೆಯಲ್ಲಿ ಇಲಿ.
‌‌‌‌‌‌ ನಮ್ಮ ವಿಶ್ವೇಶ್ವರಣ್ಣನದು ದೊಡ್ಡ ಹೊಟ್ಟೆ. ಅಷ್ಟು ದೊಡ್ಡ ಹೊಟ್ಟೆ ಹೊತ್ತು ಕ್ರಿಕೆಟ್ ಮೈದಾನದಲ್ಲಿ ಓಡುತ್ತಿದ್ದರೆ ಎಂಥ ನವತರುಣರೂ ನಾಚಬೇಕು. ಅದ್ಭುತ ವಿಕೆಟ್‌ ಕೀಪರ್‌ ಆತ.
ನನ್ನ ಬಗೆಗೆ ಆತನಿಗೆ ಯಾವಾಗಲೂ ಪ್ರೀತಿ, ಕಾಳಜಿ, ಒಮ್ಮೆ ನನಗೆ ಕೇಡೊದಗಿದಾಗ ಅದೆಲ್ಲಿದ್ದನೋ……. ಸುದ್ದಿ ಕೇಳಿದ್ದೆ ತಕ್ಷಣ ನಾಲ್ಕು ಜನರೊಂದಿಗೆ ಹಾಜರಾಗಿದ್ದ. ಅಂತಹ ವ್ಯಕ್ತಿಯ ಬಗ್ಗೆ ನಾಲ್ಕಕ್ಷರ ಬರೆಯಬೇಕೆನ್ನಿಸಿತು. ನಿನ್ನ ಬಗೆಗೆ ಬರೆದಿದ್ದೇನೆ ನಿನ್ನದೊಂದು ಚಂದದ ಫೋಟೊ ಬೇಕು ಎಂದು ಹೇಳುವ ಕಾಲಕ್ಕೂ ಆತ ಕ್ರಿಕೆಟ್‌ ಗ್ರೌಂಡಿನಲ್ಲೇ ಇದ್ದಾನೆ. ಅಬ್ಭಾ! ಅವನ ಕ್ರೀಡಾ ಪ್ರೇಮವೇ……

RELATED ARTICLES  ಕುಮಟಾ ಹೊನ್ನಾವರದಲ್ಲಿ ಮುಂದುವರಿದ ಕೊರೋನಾ ಕಾಟ

ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ವಿ.ಜಿ.ಹೆಗಡೆ ಚಿಟ್ಟಾಣಿಯವರಿಗೆ ಮತ್ತು ಅವರ ಕುಟುಂಬಕ್ಕೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯಗಳನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಕಡಮೆ ಶ್ರೀ ಬೀರ ದೇವರ ವರ್ಧಂತಿ ಇಂದು.

ವಿಶ್ವೇಶ್ವರಣ್ಣನಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ